Wednesday, June 3, 2026
Homeಅಪರಾಧವ್ಯಕ್ತಿಯೋರ್ವರಿಗೆ ಡ್ರಾಪ್ ಕೊಡುವ ನೆಪದಲ್ಲಿ ಹಲ್ಲೆ ಪ್ರಕರಣ; ನಗ, ನಗದು ದೋಚಿ ಪರಾರಿಯಾದ ತಂಡ

ವ್ಯಕ್ತಿಯೋರ್ವರಿಗೆ ಡ್ರಾಪ್ ಕೊಡುವ ನೆಪದಲ್ಲಿ ಹಲ್ಲೆ ಪ್ರಕರಣ; ನಗ, ನಗದು ದೋಚಿ ಪರಾರಿಯಾದ ತಂಡ

- Advertisement -
- Advertisement -

ಬಂಟ್ವಾಳ: ಕೊಡಗಿನ ವಿರಾಜಪೇಟೆ ಮೂಲದ ವ್ಯಕ್ತಿಯೋರ್ವರನ್ನು ಡ್ರಾಪ್ ಕೊಡುವ ನೆಪದಲ್ಲಿ ಕಾರಿನಲ್ಲಿ ಕುಳ್ಳಿರಿಸಿದ ತಂಡವೊಂದು ಕೆಲ ದೂರ ಸಾಗಿ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ ಆತನ ಬಳಿಯಿದ್ದ ನಗ ನಗದು ದೋಚಿ ಪರಾರಿಯಾಗಿರುವ ಘಟನೆ ಬಂಟ್ವಾಳದಲ್ಲಿ ನಡೆದಿದೆ.

ನಗ, ನಗದು ಕಳೆದುಕೊಂಡಿರುವ ವ್ಯಕ್ತಿ ವಿರಾಜಪೇಟೆಯ ಎಂ. ಗಂಗಾಧರ ಎಂದು ತಿಳಿದು ಬಂದಿದೆ.

ಘಟನೆಯ ವಿವರ: ಕಳೆದ ಶುಕ್ರವಾರದಂದು(ಆಗಸ್ಟ್ 9) ಕೊಡಗಿನ ವಿರಾಜಪೇಟೆ ನಿವಾಸಿಯಾಗಿರುವ ಎಂ. ಗಂಗಾಧರ ಅವರು ವಿರಾಜಪೇಟೆಯಿಂದ ಬಿಸಿ ರೋಡ್‌ ಗೆ ರಾತ್ರಿ ಸುಮಾರು ಒಂಬತ್ತು ಗಂಟೆಯ ವೇಳೆಗೆ ಬಂದಿದ್ದರು.ಬಂಟ್ವಾಳದ ನರಿಕೊಂಬಿನಲ್ಲಿರುವ ಅಣ್ಣನ ಮನೆಗೆ ತೆರಳಲು ಬಿ.ಸಿ.ರೋಡ್ ನಲ್ಲಿ ವಾಹನಕ್ಕಾಗಿ ಕಾಯುತ್ತಿದ್ದರು. ಈ ವೇಳೆ ಅದೇ ದಾರಿಯಲ್ಲಿ ಅಪರಿಚಿತ ಕಾರೊಂದು ಬಂದಿದ್ದು ಗಂಗಾಧರ ಅವರ ಬಳಿ ಯಾವ ಕಡೆ ಹೋಗುವವರು ಎಂದು ವಿಚಾರಿಸಿದ್ದಾರೆ. ಅಲ್ಲದೆ ನಾವು ಕೂಡ ಅದೇ ಮಾರ್ಗವಾಗಿ ಹೋಗುತ್ತಿದ್ದು ನಿಮ್ಮನ್ನು ಡ್ರಾಪ್ ಮಾಡುತ್ತೇವೆ ಎಂದು ಹೇಳಿ ಗಂಗಾಧರ ಅವರನ್ನು ಕಾರಿಗೆ ಹತ್ತಿಸಿದ್ದಾರೆ. ಕಾರು ಸ್ವಲ್ಪ ದೂರ ತೆರಳಿದ ಬಳಿಕ ಕಾರಿನ ಹಿಂಬದಿ ಸೀಟಿನಲ್ಲಿ ಕುಳಿತ್ತಿದ್ದ ಇಬ್ಬರು ವ್ಯಕ್ತಿಗಳು ಗಂಗಾಧರ ಅವರ ಮೇಲೆ ಹಲ್ಲೆ ನಡೆಸಿ ಬಳಿಕ ಅವರ ಬಳಿಯಿದ್ದ 80 ಸಾವಿರ ರೂ. ಮೌಲ್ಯದ ಚಿನ್ನದ ಸರ ಮತ್ತು 2 ಸಾವಿರ ರೂ. ನಗದು ಹಣವನ್ನು ಕಸಿದುಕೊಂಡು ಬಳಿಕ ಅವರನ್ನು ಕಾರಿನಿಂದ ದೂಡಿ ಹಾಕಿ ಸ್ಥಳದಿಂದ ಪರಾರಿಯಾಗಿದ್ದಾರೆ.

ಇನ್ನು ಹಲ್ಲೆಗೊಳಗಾದ ಗಂಗಾಧರ ಅವರು ಸಾರ್ವಜನಿಕರ ಸಹಕಾರದಿಂದ ಸಹೋದರನಿಗೆ ಕರೆ ಮಾಡಿದ್ದಾರೆ. ನಂತರದಲ್ಲಿ ಗಾಯಕ್ಕೆ ಚಿಕಿತ್ಸೆಯನ್ನು ಕೂಡ ಪಡೆದುಕೊಂಡಿದ್ದಾರೆ.

ಘಟನೆಯ ಕುರಿತಂತೆ ಆಗಸ್ಟ್ 14 ಬುಧವಾರದಂದು ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಳ್ಳರ ತಂಡದ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

- Advertisement -

Latest News

error: Content is protected !!