ಬೆಂಗಳೂರು: ಸೆಪ್ಟೆಂಬರ್ 2 ರಂದು ಪ್ರಧಾನಿ ನರೇಂದ್ರ ಮೋದಿ ಮಂಗಳೂರು ಭೇಟಿಯನ್ನು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಟೀಕಿಸಿದ್ದಾರೆ.
ದೇಶಕ್ಕೆ ಆರ್ಥಿಕ ಶಕ್ತಿ ಕೊಡುವಂತಹ ನಗರ ಮಂಗಳೂರು. ಆದರೆ ದೇಶಕ್ಕೆ ಮಾರಕ ಆಗುವಂತಹ ವಾತಾವರಣವನ್ನು ಅಲ್ಲಿ ಸೃಷ್ಟಿ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಯಾವ ಸಂದೇಶ ಕೊಡಲು ಮಂಗಳೂರಿಗೆ ಬರುತ್ತಿದ್ದಾರೆ ಎಂದು ಕುಮಾರಸ್ವಾಮಿ
ಪ್ರಶ್ನೆ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಇಂದು ಜೆಡಿಎಸ್ ಮುಖ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೆಚ್.ಡಿ. ಕುಮಾರಸ್ವಾಮಿ, ಶಾಂತಿಯುತವಾಗಿ ಹೂಡಿಕೆದಾರರು ಬರುವ ರೀತಿ ಅವರು ಸಂದೇಶ ಕೊಟ್ಟರೆ ಅವರು ಬಂದಿದ್ದಕ್ಕೂ ಸಾರ್ಥಕ ಆಗುತ್ತದೆ. ಮತ್ತೆ ಇದೇ ಸಂಘರ್ಷ ಮುಂದುವರಿದರೆ ಪ್ರಧಾನಿ ಬಂದರೂ ಏನು ಪ್ರಯೋಜನ ಎಂದು ಹೇಳಿದ್ದಾರೆ.
ಈ ರಾಜ್ಯಕ್ಕೆ ಉತ್ತಮ ಹೆಸರಿದೆ. ಬಂಡವಾಳ ಹೂಡಿಕೆದಾರರು ಯೋಚನೆ ಮಾಡುತ್ತಿದ್ದಾರೆ. ಇದರ ಬಗ್ಗೆ ಚರ್ಚೆ ಮಾಡಿ ಎಂದು ರಾಜ್ಯ ಸರಕಾರಕ್ಕೆ ಸಲಹೆ ನೀಡಿದ ಹೆಚ್ ಡಿಕೆ, ಅಭಿವೃದ್ಧಿಗೆ ಸಂಬಂಧಿಸಿದಂತೆ ಎರಡೂ ಪಕ್ಷದಿಂದಲೂ ಯಾವುದೇ ವಿಚಾರ ಇಲ್ಲ. ಒಬ್ಬರು ಸಾವರ್ಕರ್, ಮತ್ತೊಬ್ಬರು ಮಾಂಸ ತಿನ್ನುವ ವಿಚಾರ ಇಟ್ಟುಕೊಂಡು ಹೋಗುತ್ತಿದ್ದಾರೆ. ಆದರೆ, ನಾವು ವಿಷಯಾಧಾರಿತವಾಗಿ ಹೊರಟಿದ್ದೇವೆ. ಜನತೆ ಮುಂದೆ ನಾವು ಅಭಿವೃದ್ಧಿ ವಿಚಾರ ತೆಗೆದುಕೊಂಡು ಹೋಗುತ್ತಿದ್ದೇವೆ ಎಂದು ಹೇಳಿದ್ದಾರೆ.


