ಆರ್ ಬಿಐ ರೆಪೊ ದರವನ್ನು 50 ಮೂಲಾಂಶಗಳಷ್ಟು ಹೆಚ್ಚಿಸಿದೆ. ರೆಪೊ ದರಗಳನ್ನು ಆರ್ಬಿಐ ಸತತ ಮೂರನೇ ಬಾರಿ ಹೆಚ್ಚಿಸಿದ್ದು, ಪ್ರಸ್ತುತ ರೆಪೊ ದರಗಳು ಶೇ 5.4ರಷ್ಟು ಇರುತ್ತವೆ. ಈ ದರ ಹೆಚ್ಚಳವು ತಕ್ಷಣದಿಂದಲೇ ಜಾರಿಗೆ ಬರಲಿದೆ. ಇದು ಆಗಸ್ಟ್ 2019ರ ಮಟ್ಟದ ರೆಪೊ ದರವಾಗಿದ್ದು, ಕೊವಿಡ್ ಪಿಡುಗು ಕಾಣಿಸಿಕೊಳ್ಳುವ ಮೊದಲಿನ ಹಂತಕ್ಕೆ ರೆಪೊ ದರ ಮುಟ್ಟಿದೆ. ದೇಶಾದ್ಯಂತ ಎಲ್ಲ ಬ್ಯಾಂಕ್ಗಳಲ್ಲಿಯೂ ಬಡ್ಡಿದರಗಳು ಹೆಚ್ಚಾಗಲಿವೆ.
ಮುಂಬೈನಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಹಣಕಾಸು ನಿರ್ವಹಣಾ ಸಮಿತಿಯ ತೀರ್ಮಾನ ಪ್ರಕಟಿಸಿದ ಅವರು, ಪಾಲಿಸಿ ರೆಪೊ ದರ ಹೆಚ್ಚಿಸಿರುವುದನ್ನು ಪ್ರಕಟಿಸಿದರು. ದೇಶದಲ್ಲಿ ಹಣದುಬ್ಬರ ಪ್ರಮಾಣ ಹೆಚ್ಚಾಗಿರುವುದರಿಂದ ಇಂಥ ಕಠಿಣ ತೀರ್ಮಾನ ತೆಗೆದುಕೊಳ್ಳುವುದು ಅನಿವಾರ್ಯವಾಗಬಹುದು ಎಂದು ಉದ್ಯಮ ಜಗತ್ತು ಮೊದಲೇ ಅಂದಾಜಿಸಿತ್ತು. ಕೊವಿಡ್ ದೇಶವನ್ನು ವ್ಯಾಪಿಸಿದ ನಂತರ ಆರ್ಥಿಕತೆ ಕುಸಿತದತ್ತ ಸಾಗಿತ್ತು. ಇದನ್ನು ತಡೆಗಟ್ಟಲೆಂದು ಮಾರ್ಚ್ 2020ರಲ್ಲಿ ಆರ್ಬಿಐ ರೆಪೊ ದರಗಳನ್ನು ಗಣನೀಯ ಪ್ರಮಾಣದಲ್ಲಿ ಕಡಿಮೆ ಮಾಡಿ ಸುಲಭವಾಗಿ ಸಾಲ ಸಿಗುವಂತೆ ಮಾಡಿತ್ತು.
ಇದೀಗ ದೇಶವು ಕೊವಿಡ್ನಿಂದ ಚೇತರಿಸಿಕೊಂಡಿದ್ದು ಆರ್ಥಿಕತೆಯು ಸಹಜ ಸ್ಥಿತಿಗೆ ಮರಳುತ್ತಿದೆ. ಆದರೆ ರಷ್ಯಾ-ಉಕ್ರೇನ್ ಸಂಘರ್ಷ, ಚೀನಾದಲ್ಲಿ ಆರ್ಥಿಕ ಸಂಕಷ್ಟದಿಂದಾಗಿ ಜಗತ್ತು ಹಲವು ಸವಾಲು ಎದುರಿಸುವಂತಾಗಿದೆ. ಇದರ ಪರಿಣಾಮಗಳು ಭಾರತದಲ್ಲಿಯೂ ಗೋಚರವಾಗುತ್ತಿದ್ದು, ಹಣದುಬ್ಬರ ಹೆಚ್ಚಾಗಿದೆ. ಅಗತ್ಯವಸ್ತುಗಳ ಬೆಲೆಏರಿಕೆ ನಿಯಂತ್ರಿಸಬೇಕಾದ ಒತ್ತಡದಲ್ಲಿರುವ ಆರ್ಬಿಐ ಹಣಕಾಸಿನ ಹರಿವನ್ನು ನಿರ್ಬಂಧಿಸುವ ಮೂಲಕ ಮಾರುಕಟ್ಟೆಯಲ್ಲಿ ನಗದು ಚಲಾವಣೆಗೆ ಕಡಿವಾಣ ಹಾಕಲು ಮುಂದಾಗಿದೆ. ಮೇ 4, 2022ರಲ್ಲಿ ಆರ್ಬಿಐ ತನ್ನ ವಿಶೇಷಾಧಿಕಾರ ಬಳಸಿ, ಹಠಾತ್ತನೆ ರೆಪೊ ದರಗಳನ್ನು ಹೆಚ್ಚಿಸಿತ್ತು. ಅದಾದ ನಂತರ ಇದು 3ನೇ ರೆಪೊ ದರ ಹೆಚ್ಚಳವಾಗಿದೆ.


