ಮಂಗಳೂರು: ಮೀನುಗಾರಿಕೆಗೆ ಸರಕಾರ ವಿಧಿಸಿದ್ದ 61 ದಿನಗಳ ನಿಷೇಧ ಜು. 31ಕ್ಕೆ ಮುಕ್ತಾಯಗೊಂಡಿದೆ. ಇಂದಿನಿಂದ ದೋಣಿಗಳು ಸಮುದ್ರಕ್ಕಿಳಿದಿವೆ. ಮೀನುಗಾರಿಕೆಗೆ ಬೋಟು, ಎಂಜಿನ್‌ಗಳನ್ನು ದುರಸ್ತಿಗೊಳಿಸಿ ಬಲೆಗಳನ್ನು ಸಿದ್ಧಗೊಳಿಸಿ ಇಂದಿನಿಂದ ಸಮುದ್ರಕ್ಕೆ ಇಳಿದಿದ್ದಾರೆ.
ಐಸ್‌ಪ್ಲಾಂಟ್‌ಗಳು ನಿನ್ನೆಯಿಂದಲೇ ಕಾರ್ಯಾರಂಭಿಸಿದ್ದು, ಕಡಲಿಗಿಳಿಯುವ ಬೋಟುಗಳಿಗೆ ಮಂಜುಗಡ್ಡೆ ತುಂಬಿಸಲಾಗುತ್ತಿದೆ. ಸರ್ಕಾರದ ತೆರಿಗೆ ರಹಿತ ಡೀಸೆಲ್ ನೀಡುವ ಕಾರ್ಯ ಇಂದಿನಿಂದ ಆರಂಭವಾಗಿದೆ. ಆಳಸಮುದ್ರಕ್ಕೆ ತೆರಳುವ ಬೋಟುಗಳಲ್ಲಿ 15 ದಿನಗಳಿಗೆ ಬೇಕಾಗುವ ಆಹಾರ ಸಾಮಗ್ರಿಗಳನ್ನು ಕೊಂಡೊಯ್ಯಲಾಗುತ್ತದೆ. ದೋಣಿಗಳ ಕಾರ್ಮಿಕರಲ್ಲಿ ಹೆಚ್ಚಿನವರು ಹೊರ ರಾಜ್ಯಗಳಿಗೆ ಸೇರಿದ್ದು ಊರಿನಿಂದ ಮರಳಿದ್ದಾರೆ.
ಆಳಸಮುದ್ರಕ್ಕೆ ತೆರಳುವ ಟ್ರಾಲ್ ಬೋಟುಗಳು ಇಂದಿನಿಂದ ಮೀನುಗಾರಿಕೆಗೆ ತೆರಳಲು ನಿರ್ಧರಿಸಿವೆಯಾದರೂ ಆ. 3ರ ವರೆಗೆ ಸಮುದ್ರ ಪ್ರಕ್ಷುಬ್ಧವಾಗಿರುತ್ತದೆ ಎಂಬ ಹವಾಮಾನ ಇಲಾಖೆಯ ಮುನ್ಸೂಚನೆಯ ಹಿನ್ನೆಲೆಯಲ್ಲಿ ಅಂದಿನ ಹವಾಮಾನ ನೋಡಿಕೊಂಡು ಕಡಲಿಗಿಳಿಯುವ ಸಾಧ್ಯತೆಗಳಿವೆ. ಆ. 12ರಂದು ಸಮುದ್ರ ಪೂಜೆ ಮಾಡಿ ಆ. 13ರಿಂದ ಮೀನುಗಾರಿಕೆಗೆ ನಡೆಸಲು ಪರ್ಸಿನ್ ಬೋಟುಗಳ ಮಾಲೀಕರು ತೀರ್ಮಾನಿಸಿದ್ದಾರೆ.


