Saturday, May 18, 2024
Homeತಾಜಾ ಸುದ್ದಿಮಂಗಳೂರು: ಭೂಕುಸಿತದಿಂದಾಗಿ ಬಾವಿ-ಹಳ್ಳಗಳೇ ನಾಪತ್ತೆ: ಕೃಷಿ ಭೂಮಿಗೆ ನುಗ್ಗಿದ ಕೆಸರು ನೀರು: ಅವೈಜ್ಞಾನಿಕ ಕಾಮಗಾರಿ ವಿರುದ್ಧ...

ಮಂಗಳೂರು: ಭೂಕುಸಿತದಿಂದಾಗಿ ಬಾವಿ-ಹಳ್ಳಗಳೇ ನಾಪತ್ತೆ: ಕೃಷಿ ಭೂಮಿಗೆ ನುಗ್ಗಿದ ಕೆಸರು ನೀರು: ಅವೈಜ್ಞಾನಿಕ ಕಾಮಗಾರಿ ವಿರುದ್ಧ ಗ್ರಾಮಸ್ಥರ ಆಕ್ರೋಶ

spot_img
- Advertisement -
- Advertisement -

ಮಂಗಳೂರು: ಇಲ್ಲಿನ ನೀರುಮಾರ್ಗ ಗ್ರಾಮ ಪಂಚಾಯಿತಿಯ ಪಡು ಪಾದೆಗುರಿ ವ್ಯಾಪ್ತಿಯಲ್ಲಿ ಗುಡ್ಡ ಸಮತಟ್ಟು ಮಾಡಿದ ಬಳಿಕ ಭಾರಿ ಮಳೆಯಾಗುತ್ತಿರುವುದರಿಂದ ಈ ವ್ಯಾಪ್ತಿಯಲ್ಲಿ ಭೂಕುಸಿತ ಉಂಟಾಗಿ ಬಾವಿ, ಹಳ್ಳಗಳೇ ನಾಪತ್ತೆಯಾಗಿರುವ ಘಟನೆ ನಡೆದಿದೆ. ಹತ್ತಾರು ಎಕರೆ ಕೃಷಿ ಭೂಮಿಗೆ ಕೆಸರು ನೀರು ನುಗ್ಗಿದೆ.

ಪಡು ಪಾದೆಗುರಿ ವ್ಯಾಪ್ತಿಯಲ್ಲಿ ಸುಮಾರು 100 ಅಡಿಗೂ ಎತ್ತರದ ಗುಡ್ಡ ಪ್ರದೇಶವನ್ನು ಬೇಸಿಗೆಯಲ್ಲಿ ಅಗೆದು ಸಮತಟ್ಟು ಮಾಡಿ ನಿವೇಶನಕ್ಕೆ ಸಿದ್ಧತೆ ಮಾಡಲಾಗಿತ್ತು. ಒಂದೆರಡು ಸೈಟ್‌ಗಳಲ್ಲಿ ಮನೆ ನಿರ್ಮಾಣ ಕಾರ್ಯವೂ ಆಗುತ್ತಿದೆ. ಆದರೆ ಕಳೆದ ಕೆಲದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಈ ವ್ಯಾಪ್ತಿಯಲ್ಲಿ ಭೂಕುಸಿತ ಉಂಟಾಗಿ ತಗ್ಗು ಪ್ರದೇಶದಲ್ಲಿರುವ ಭತ್ತ, ತೆಂಗು, ಅಡಕೆ ಕೃಷಿ ಭೂಮಿಗೆ ಕೆಸರು ನೀರು ನುಗ್ಗಿದೆ. ಅವೈಜ್ಞಾನಿಕ ಕಾಮಗಾರಿಯಿಂದ ನಿವೇಶನಗಳಲ್ಲಿ ನಿರ್ಮಾಣವಾದ ಮನೆಗಳು, ಕಾಂಪೌಂಡ್‌ಗಳು ಕೂಡ ಕುಸಿಯುವ ಭೀತಿ ಎದುರಾಗಿದೆ.

ಸುಮಾರು 100 ಅಡಿ ಎತ್ತರ ಭಾಗದ ಗುಡ್ಡದಿಂದ ಭಾರಿಮಳೆಗೆ ಮಣ್ಣು ಸಹಿತ ಮಳೆ ನೀರು ಹರಿದು ಬರುತ್ತಿದೆ. ಇದು ನೇರವಾಗಿ ಕೃಷಿ ಭೂಮಿಗಳಿಗೆ ಹೊಕ್ಕಿದ್ದು, ಸುಮಾರು 20 ಎಕರೆಗೂ ಅಧಿಕ ಕೃಷಿ ಭೂಮಿಗೆ ತೊಂದರೆಯಾಗಿದೆ.

ಅವೈಜ್ಞಾನಿಕ ಕಾಮಗಾರಿಯಿಂದ 20 ಎಕರೆಗೂ ಅಧಿಕ ಕೃಷಿ ಭೂಮಿಗೆ ಹಾನಿಯಾಗಿದ್ದು, ಈ ಬಗ್ಗೆ ಈಗಾಗಲೇ ನೀರುಮಾರ್ಗ ಗ್ರಾಮ ಪಂಚಾಯಿತಿ, ಗ್ರಾಮ ಲೆಕ್ಕಾಧಿಕಾರಿಗೆ ದೂರು ನೀಡಲಾಗಿದೆ. ಆದರೆ, ಸಮಸ್ಯೆ ಮಾತ್ರ ಬಗೆಹರಿದಿಲ್ಲ. ಕೂಡಲೇ ಜಿಲ್ಲಾಡಳಿತ ಮಧ್ಯಪ್ರವೇಶಿಸಿ ಕೃಷಿ ಭೂಮಿ ರಕ್ಷಿಸಬೇಕು ಮತ್ತು ಹಾನಿಗೀಡಾದ ಕೃಷಿ ಪ್ರದೇಶದ ರೈತರಿಗೆ ನ್ಯಾಯ ಒದಗಿಸಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಗ್ರಾಮಸ್ಥರೆಲ್ಲ ಒಟ್ಟು ಸೇರಿ ಹೋರಾಟ ಮಾಡುವುದು ಅನಿವಾರ್ಯವಾದೀತು ಎಂದು ಯತೀಶ್‌ ಕರಂದಾಡಿ ಎಚ್ಚರಿಸಿದ್ದಾರೆ.

ಗುಡ್ಡ ಸಮತಟ್ಟು ಮಾಡುವ ವೇಳೆ ಸಂಪೂರ್ಣ ಅವೈಜ್ಞಾನಿಕವಾಗಿ ಕಾಮಗಾರಿ ನಡೆಸಲಾಗಿದೆ. ಮಳೆ ನೀರು ಹರಿದು ಹೋಗುವ ಹಳ್ಳಗಳನ್ನು ಮುಚ್ಚಲಾಗಿದೆ. ಇದರಿಂದ ಸಿಕ್ಕ ಸಿಕ್ಕಲ್ಲಿ ಮಣ್ಣು ಮಿಶ್ರಿತ ಮಳೆ ನೀರು ಹೋಗಿ ದೊಡ್ಡ ತೋಡುಗಳು ಮುಚ್ಚಿ ಹೋಗಿವೆ. ಅಡಕೆ, ತೆಂಗು ತೋಟಗಳಿಗೆ ಮಣ್ಣು ತುಂಬಿದೆ. ತಗ್ಗು ಪ್ರದೇಶದಲ್ಲಿರುವ ಬಾವಿಗಳು ಮಣ್ಣು ಮಿಶ್ರಿತ ನೀರಿನಿಂದ ತುಂಬಿಹೋಗಿವೆ.

ಅವೈಜ್ಞಾನಿಕ ಕಾಮಗಾರಿಯಿಂದ ಮಣ್ಣುಮಿಶ್ರಿತ ಮಳೆ ನೀರು ಕೃಷಿ ಭೂಮಿ, ಬಾವಿ, ಹಳ್ಳಗಳಿಗೆ ನುಗ್ಗಿದೆ. ಈಗಿನ ಕಾಲದಲ್ಲಿ ಕೃಷಿಗೆ ಆಸಕ್ತಿ ತೋರುವವರೇ ಇಲ್ಲ. ಕೃಷಿ ಮಾಡುವವರಿಗೆ ಈ ರೀತಿ ಅನ್ಯಾಯ ಮಾಡಿದರೆ ಕೃಷಿ ಉಳಿಯುವುದಾದರೂ ಹೇಗೆ? ಈ ಬಗ್ಗೆ ನೀರುಮಾರ್ಗ ಗ್ರಾಮ ಪಂಚಾಯಿತಿ ದೂರು ನೀಡಿದ್ದೇವೆ ಎಂದು ಕೃಷಿಕರು ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!