Saturday, June 6, 2026
Homeತಾಜಾ ಸುದ್ದಿನಾಳೆಯಿಂದ ಜನತಾ ಜಲಧಾರೆ ಆರಂಭ: ಕೃಷ್ಣರಾಜ ಸಾಗರದಲ್ಲಿ ದೇವೇಗೌಡರು, ಆಲಮಟ್ಟಿಯಲ್ಲಿ ಹೆಚ್ ಡಿಕೆಯವರಿಂದ ಜಲಸಂಗ್ರಹ

ನಾಳೆಯಿಂದ ಜನತಾ ಜಲಧಾರೆ ಆರಂಭ: ಕೃಷ್ಣರಾಜ ಸಾಗರದಲ್ಲಿ ದೇವೇಗೌಡರು, ಆಲಮಟ್ಟಿಯಲ್ಲಿ ಹೆಚ್ ಡಿಕೆಯವರಿಂದ ಜಲಸಂಗ್ರಹ

- Advertisement -
- Advertisement -

ಬೆಂಗಳೂರು: ರಾಜ್ಯದ ಸಮಗ್ರ ನೀರಾವರಿ ಯೋಜನೆಗಳ ಜಾರಿಗೆ ಸಂಕಲ್ಪ ಮಾಡಿ ಜಾತ್ಯತೀತ ಜನತಾ ದಳ ಹಮ್ಮಿಕೊಂಡಿರುವ ಜನತಾ ಜಲಧಾರೆ- ಗಂಗಾ ರಥಯಾತ್ರೆಗೆ ನಾಳೆಯಿಂದ (ಏಪ್ರಿಲ್ 16) ಚಾಲನೆ ಸಿಗಲಿದೆ. ಭಾನುವಾರ ಬೆಳಗ್ಗೆ 11 ಗಂಟೆಗೆ ರಾಜ್ಯದ 15 ಜೀವ ನದಿಗಳ ಪುಣ್ಯಜಲವನ್ನು ಕಲಶಕ್ಕೆ ತುಂಬಿಕೊಳ್ಳುವ ಕಾರ್ಯಕ್ರಮ ನಡೆಯಲಿದ್ದು, ಈಗಾಗಲೇ ಹದಿನೈದು ಗಂಗಾ ರಥಗಳು ನಿಗಧಿತ ಸ್ಥಳಗಳನ್ನು ತಲುಪಿದ್ದು, ಆಯಾ ಜಿಲ್ಲೆಗಳ ಪಕ್ಷದ ಅಧ್ಯಕ್ಷರು, ಶಾಸಕರು, ಕಾರ್ಯಕರ್ತರು ಅವುಗಳನ್ನು ಬರ ಮಾಡಿಕೊಂಡಿದ್ದಾರೆ.

ನಾಳೆ ಬೆಳಗ್ಗೆ ವೇದ ಮಂತ್ರ ಘೋಷಣೆ, ಪೂಜೆ, ಮಂಗಳ ವಾದ್ಯಗಳ ಸದ್ದು, ಕಲಾ ತಂಡಗಳ ಮೆರವಣಿಗೆ, ಕಲಶ ಪೂಜೆ, ಪಕ್ಷದ ಕಾರ್ಯಕರ್ತೆಯರಿಂದ ಕಲಶ ಮೆರವಣಿಗೆ ಇತ್ಯಾದಿಗಳ ನಡುವೆ ಪುಣ್ಯಜಲವನ್ನು ಸಂಗ್ರಹ ಮಾಡಿಕೊಳ್ಳಲಾಗುವುದು. ಮಾಜಿ ಪ್ರಧಾನಮಂತ್ರಿಗಳು, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಹೆಚ್.ಡಿ.ದೇವೇಗೌಡರು, ಮಂಡ್ಯ ಜಿಲ್ಲೆಯ ಕೃಷ್ಣರಾಜ ಸಾಗರದಲ್ಲಿ ಕಾವೇರಿ ಜಲ ಸಂಗ್ರಹ ಕಾರ್ಯಕ್ರಮದಲ್ಲಿ ಭಾಗಿಯಾಗುವರು.

ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರು ಆಲಮಟ್ಟಿಯ ಲಾಲ್ ಬಹಾದ್ದೂರ್ ಶಾಸ್ತ್ರಿ  ಜಲಾಶಯದಲ್ಲಿ ಜಲಸಂಗ್ರಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಇದಲ್ಲದೆ, ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರು ಹಾಸನ ಜಿಲ್ಲೆಯ ಹೇಮವತಿಯಲ್ಲಿ, ಜೆಡಿಎಸ್ ಯುವ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಚಿಕ್ಕಬಳ್ಳಾಪುರ ಜಿಲ್ಲೆಯ ವಿಧುರಾಶ್ವತ್ತದ ಉತ್ತರ ಪಿನಾಕಿನಿ ನದಿಯಲ್ಲಿ ಜಲ ಸಂಗ್ರಹ ಮಾಡಲಿದ್ದಾರೆ. ರಾಮನಗರ ವಿಧಾನಸಭೆ ಕ್ಷೇತ್ರದ ಶಾಸಕಿ ಶ್ರೀಮತಿ ಅನಿತಾ ಕುಮಾರಸ್ವಾಮಿ ಅವರು ಮೇಕೆದಾಟು ನಲ್ಲಿ ಕಾವೇರಿ ನದಿ ನೀರು ಸಂಗ್ರಹ ಮಾಡಿಕೊಳ್ಳಲಿದ್ದಾರೆ. ಮೇ. 8 ರವರೆಗೂ ನಡೆಯಲಿರುವ ಜಲಧಾರೆ ಕಾರ್ಯಕ್ರಮದಲ್ಲಿ ಒಟ್ಟು 94 ಕಡೆ ಜಲ ಸಂಗ್ರಹ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.

- Advertisement -

Latest News

error: Content is protected !!