ಪುತ್ತೂರು: ಕಳೆದ 3 ದಶಕಗಳಿಂದ ಕಲುಷಿತ ನೀರನ್ನೇ ಕುಡಿಯುತ್ತಿರುವ ದಕ್ಷಿಣಕನ್ನಡ ಜಿಲ್ಲೆಯ ಕೊಳಿಗೆ ಗ್ರಾಮಪಂಚಾಯತ್ ವ್ಯಾಪ್ತಿಯ ಸಿದ್ಧಮೂಲ ಕಾಲನಿ ದಲಿತ ಕುಟುಂಬಗಳಿಗೆ ನೀರಿನ ವ್ಯವಸ್ಥೆ ಕಲ್ಪಿಸಬೇಕೆಂದು ಆಗ್ರಹಿಸಿ ದಲಿತ ಸೇವಾ ಸಮಿತಿ ನೇತೃತ್ವದಲ್ಲಿ ಇಂದು ಕೋಲ್ತಿಗೆ ಗ್ರಾಮ ಪಂಚಾಯತ್ ಎದುರು ಪ್ರತಿಭಟನೆ ನಡೆಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ದಲಿತ ಸೇವಾ ಸಮಿತಿ ಸ್ಥಾಪನಾಧ್ಯಕ್ಷ ಸೇಸಪ್ಪ ಬೆದ್ರಕಾಡು, “ಸಿದ್ಧಮೂಲೆಯಲ್ಲಿ ಕಳೆದ ಹಲವು ವರ್ಷಗಳಿಂದ ವಾಸಿಸುತ್ತಿರುವ ದಲಿತ ಕುಟುಂಬಗಳು ಕಲುಷಿತ ನೀರನ್ನು ಕುಡಿಯುತ್ತಿದ್ದಾರೆ. ರಸ್ತೆ ಪಕ್ಕದಲ್ಲೇ ಇರುವ ಕೆರೆಯೊಂದರ ನೀರನ್ನು ತನ್ನ ಎಲ್ಲಾ ಕಾರ್ಯಗಳಿಗೂ ಬಳಸುವ ಅನಿವಾರ್ಯತೆಯಲ್ಲಿದ್ದಾರೆ. ಈ ಕುಟುಂಬಗಳು ಅನುಭವಿಸುತ್ತಿದ್ದ ನೀರಿನ ತೊಂದರೆ ಕುರಿತು ಮಾಧ್ಯಮಗಳೂ ಬೆಳಕು ಚೆಲ್ಲಿವೆ. ಈ ಎಲ್ಲಾ ಅವ್ಯವಸ್ಥೆಗಳು ಗ್ರಾಮಪಂಚಾಯತ್ ಅಧಿಕಾರಿಗಳು ಹಾಗೂ ಅಧ್ಯಕ್ಷರ ಗಮನಕ್ಕೆ ಬಂದರೂ, ಈವರೆಗೂ ಈ ಬಗ್ಗೆ ಗಮನಹರಿಸದಿರುವುದು ಖಂಡನೀಯ” ಎಂದರು.
ಗ್ರಾಮಪಂಚಾಯತ್ ನಿಂದ ಸೂಕ್ತ ಭರವಸೆ ದೊರೆಯುವವರೆಗೂ ಪ್ರತಿಭಟನೆಯನ್ನು ಮುಂದುವರಿಸಲು ನಿರ್ಧರಿಸಿದ ಪ್ರತಿಭಟನಾಕಾರರನ್ನು ಭೇಟಿಯಾದ ಕೋಲ್ತಿಗೆ ಅಧ್ಯಕ್ಷ ಶ್ಯಾಮ ಸುಂದರ್ ರೈ ಹಾಗು ಪಿಡಿಒ ಸುನಿಲ್ ಒಂದು ತಿಂಗಳ ಒಳಗೆ ನೀರಿನ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದ್ದಾರೆ.


