ಮಂಗಳೂರು: ಮಕ್ಕಳಿಗೆ ಸಂಬಂಧಿಸಿದ ಪ್ರಕರಣಗಳನ್ನು ಮಕ್ಕಳ ಸ್ನೇಹಿಯಾಗಿ ನಿಭಾಯಿಸಲು ಪ್ರತೀ ಪೊಲೀಸ್ ಠಾಣೆಯಲ್ಲೂ “ಎಸ್‌ಜೆಪಿಯು’ (ಸ್ಪೆಶಲ್ ಜುವೆನೈಲ್ ಪೊಲೀಸ್ ಯೂನಿಟ್-ಮಕ್ಕಳ ವಿಶೇಷ ಪೊಲೀಸ್ ಘಟಕ) ಇರಬೇಕೆಂಬ ನಿಯಮವನ್ನು ಪರಿಪೂರ್ಣ ರೀತಿಯಲ್ಲಿ ಅನುಷ್ಠಾನ ಗೊಳಿಸಲು ಇಲಾಖೆ ಮುಂದಾಗಿದೆ.
ಮಕ್ಕಳಿಗೆ ಸಂಬಂಧಿಸಿದ ಅಪರಾಧಗಳನ್ನು ಬಾಲನ್ಯಾಯ ಕಾಯಿದೆಯ ಮಾರ್ಗಸೂಚಿಯಂತೆ ನಿಭಾಯಿಸಬೇಕಾಗಿದ್ದು, ಇದಕ್ಕಾಗಿ ಎಸ್‌ಜೆಪಿಯು ಕಡ್ಡಾಯಗೊಳಿಸಲಾಗಿತ್ತು. ಆದರೆ ಪೊಲೀಸ್ ಇಲಾಖೆಯ ದಾಖಲೆಗಳಲ್ಲಿ ಇದರ ಬಗ್ಗೆ ಉಲ್ಲೇಖ ಇದೆಯೇ ವಿನಾ ವಾಸ್ತವದಲ್ಲಿ ಇದು ಪೂರ್ಣ ಪ್ರಮಾಣದಲ್ಲಿ ಅಸ್ತಿತ್ವದಲ್ಲಿ ಇರಲಿಲ್ಲ ಎಂಬ ದೂರುಗಳು ಕೇಳಿಬಂದಿದ್ದವು.
ಜತೆಗೆ ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೆ ಸಂಬಂಧಿಸಿದ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇವುಗಳ ನಿರ್ವಹಣೆಗೆ ಪರಿಪೂರ್ಣವಾದ ಎಸ್‌ಜೆಪಿಯು ಅಗತ್ಯ ಎಂಬ ಹಿನ್ನೆಲೆಯಲ್ಲಿ ಇಲಾಖೆ ಇದಕ್ಕೆ ಪೂರಕ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.
ವಿಶೇಷ ಘಟಕವು ಓರ್ವ ಎಎಸ್‌ಐ, ಮಹಿಳಾ ಹೆಡ್‌ಕಾನ್‌ಸ್ಟೆಬಲ್/ಮಹಿಳಾ ಕಾನ್‌ಸ್ಟೆಬಲ್‌ಗಳನ್ನು ಒಳಗೊಂಡಿರುತ್ತದೆ. ಮಕ್ಕಳು ಭಾಗಿಯಾಗಿರುವ (ಸಂತ್ರಸ್ತರು/ ಆರೋಪಿಗಳು) ಪ್ರಕರಣಗಳನ್ನು ಈ ಘಟಕವೇ ನಿರ್ವಹಿಸಬೇಕು. ಘಟಕದಲ್ಲಿ ಮಕ್ಕಳ ಕಲ್ಯಾಣ ಅಧಿಕಾರಿ (ಸಿಡಬ್ಲ್ಯೂಒ) ಇರಬೇಕು. ಮಕ್ಕಳ ರಕ್ಷಣೆಗೆ ಸಂಬಂಧಿಸಿದ ಸಂಸ್ಥೆಗಳ ಜತೆಗೆ ಸಮನ್ವಯ ಸಾಧಿಸುವುದು ಕೂಡ ಈ ಘಟಕದ ಜವಾಬ್ದಾರಿ.
ಮಕ್ಕಳಿಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆ ಸಂದರ್ಭ ಪೊಲೀಸರು (ಎಸ್‌ಜೆಪಿಇಯು) ಮಕ್ಕಳ ವಿಚಾರಣೆಗಾಗಿ ಅವರ ಮನೆ, ಆಸ್ಪತ್ರೆಗೆ ತೆರಳುವಾಗ ಸಮವಸ್ತ್ರ ಧರಿಸಿರಬಾರದು. ಮಾತ್ರವಲ್ಲದೆ ಮಕ್ಕಳು ಠಾಣೆಗೆ ಬಂದಾಗ ಅವರನ್ನು ವಿಚಾ ರಿ ಸಲು ಪ್ರತ್ಯೇಕವಾದ ಚಿಲ್ಡ್ರನ್ ಕಾರ್ನರ್ ಇರಬೇಕು ಎಂಬ ನಿಯಮವೂ ಇದೆ.