ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯ ಸಹಾಯಕ ಟೌನ್ ಪ್ಲಾನಿಂಗ್ ಆಫೀಸರ್ ಬಿ.ಪಿ. ಶಿವರಾಜು ರವರು ತಮ್ಮ ಸೇವಾ ಅವಧಿಯಲ್ಲಿ ನಿಗದಿತ ಆದಾಯಕ್ಕಿಂತಲೂ ಹೆಚ್ಛಿನ ಆಸ್ತಿಗಳನ್ನು ಹೊಂದಿದ್ದಾರೆಂದು ಆಗಿನ ಲೋಕಾಯುಕ್ತ ಇನ್ಸ್ಪೆಕ್ಟರ್ ಪ್ರಸನ್ನ ವಿ. ರಾಜು ಮಾಹಿತಿ ಕಲೆ ಹಾಕಿದ್ದು, ಆಗಿನ ಲೋಕಾಯುಕ್ತ ಉಪಾಧೀಕ್ಷಕರು ಮತ್ತು ಅವರ ತಂಡ ಕೇಸು ದಾಖಲಿಸಿ ದಾಳಿ ನಡೆಸಿ ಹಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದರು.
ಸುಮಾರು ಮೂವತ್ತೆಂಟು ಲಕ್ಷದಷ್ಟು ಆದಾಯಕ್ಕಿಂತ ಹೆಚ್ಚಿನ ಆಸ್ತಿ ಪತ್ತೆಯಾದ ಬಗ್ಗೆ ವರದಿಯಾಗಿದ್ದು, ತನಿಖೆಯನ್ನು ಪೂರ್ಣಗೊಳಿಸಿ ಡಿ.ವೈ. ಎಸ್.ಪಿ. ಆಗಿದ್ದ ಡಾ. ಪ್ರಭುದೇವ್ ಮಾಣೆ ರವರು ಆರೋಪಿ ಶಿವರಾಜು ವಿರುದ್ದ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಅಭಿಯೋಜನೆಯ ಪರವಾಗಿ 27 ಸಾಕ್ಷಿದಾರರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು ಹಾಗೂ 160 ದಾಖಲೆಗಳನ್ನು ಹಾಜರು ಪಡಿಸಲಾಗಿತ್ತು.ವಿಚಾರಣೆ ನಡೆಸಿದ ಮಂಗಳೂರು ಲೋಕಾಯುಕ್ತ ವಿಶೇಷ ನ್ಯಾಯಾಲಯವು ವಿಶೇಷ ಸರಕಾರಿ ಅಭಿಯೋಜಕ ಕೆ. ಎಸ್. ಎನ್. ರಾಜೇಶ್ ರವರ ವಾದವನ್ನು ಪುರಸ್ಕರಿಸಿ, ಆರೋಪಿಯ ಮೇಲಿನ ಆರೋಪ ಸಾಭೀತಾಗಿದೆ ಎಂದು ತೀರ್ಮಾನಕ್ಕೆ ಬಂದಿದೆ.
ಹದಿನೇಳು ಲಕ್ಷದಷ್ಟು ಆದಾಯಕ್ಕಿಂತ ಹೆಚ್ಚಿನ ಆಸ್ತಿಯನ್ನು ಸೇವೆಗೆ ಸೇರಿದ ವರ್ಷದಿಂದ ದಾಳಿ ನಡೆದ ದಿನಾಂಕದವರೆಗೆ ಆರೋಪಿ ಹೊಂದಿದ್ದಎಂದು ಮಾನ್ಯ ನ್ಯಾಯಾಲಯದಲ್ಲಿ ಸಾಭೀತಾದ್ದರಿಂದ ಮಾನ್ಯ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆರೋಪಿಗೆ ಶಿಕ್ಷೆ ವಿಧಿಸಿದೆ.
ಮೂರನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಬಿ. ಬಿ. ಜಕಾತಿ ರವರು ಜೂಲೈ 26 ರಂದು ಶಿಕ್ಷೆ ಪ್ರಕಟಿಸಿದ್ದಾರೆ.
ನ್ಯಾಯಾಧೀಶರಿಂದ 106 ಪುಟಗಳ ಸುಧೀರ್ಘ ಆದೇಶ ಹೊರಬಂದಿದ್ದು, ಭ್ರಷ್ಟಾಚಾರ ನಿಗ್ರಹ ಖಾಯಿದೆಯ ಕಲಂ 13 (1) (ಇ) ರ ಜೊತೆಗೆ 13(2) ರ ಅಡಿ ಯಲ್ಲಿ ಆರೋಪಿ ಶಿವರಾಜು ಅಪರಾಧ ಎಸಗಿದ್ದಾರೆಂದು ಸಾಭೀತಾಗಿದೆ.
ಆರೋಪಿಯು ಅಸೌಖ್ಯದ ಕಾರಣ ನೀಡಿ ಶಿಕ್ಷೆ ಪ್ರಮಾಣ ಕಡಿಮೆ ಮಾಡಬೇಕೆಂದು ನ್ಯಾಯಾಲಯದಲ್ಲಿ ಬೇಡಿಕೆ ಸಲ್ಲಿಸಿದ್ದನು. ವಿಶೇಷ ಸರಕಾರಿ ಅಭಿಯೋಜಕ ಕೆ.ಎಸ್.ಎನ್. ರಾಜೇಶ್ ಪ್ರಬಲ ವಾದ ಮಂಡಿಸಿ ಭ್ರಷ್ಟಾಚಾರ ಪ್ರಕರವಾದ್ದರಿಂದ ಗರಿಷ್ಟ ಶಿಕ್ಷೆ ವಿಧಿಸಬೇಕೆಂದು ನ್ಯಾಯಾಲಯವನ್ನು ಕೋರಿದ್ದರು.
ಶಿಕ್ಷೆಯ ಪ್ರಮಾಣ ಪ್ರಕಟಿಸಿದ ಮಾನ್ಯ ನ್ಯಾಯಾಧೀಶ ಬಿ.ಬಿ.ಜಕಾತಿಯವರು ಆಪರಾಧಿಗೆ 5 ವರ್ಷ ಸಾದಾ ಸಜೆ ಮತ್ತು ರೂ 34,00,000/-ದಂಡವನ್ನು ವಿಧಿಸಿದೆ. ದಂಡ ತೆರಲು ತಪ್ಪಿದಲ್ಲಿ ಒಂದು ವರ್ಷ ಸಾದಾ ಸಜೆ ವಿಧಿಸಲಾಗುವುದು ಎಂದು ಹೇಳಿದೆ.
ನ್ಯಾಯಾಧೀಶ ಬಿ.ಬಿ. ಜಕಾತಿಯವರು ತಮ್ಮ ಆದೇಶದಲ್ಲಿ ಭ್ರಷ್ಟಾಚಾರ ಎಂಬುದು ಸಮಾಜದಲ್ಲಿ ಕ್ಯಾನ್ಸರ್ ಪಿಡುಗಿನಂತೆ ಆಗಿದ್ದು ಅಪರಾಧಿಗೆ ಯಾವುದೇ ರಿಯಾಯಿತಿ ನೀಡುವುದು ಸರಿಯಲ್ಲ ಮತ್ತು ಕಳೆದ ಹದಿನಾಲ್ಕು ವರ್ಷಗಳಿಂದ ಅಕ್ರಮ ಆಸ್ತಿ ರೂ. 17,00,000 ವನ್ನು ಅಪರಾಧಿ ಬಿ. ಪಿ. ಶಿವರಾಜು ಅನುಭವಿಸಿರುವುದರಿಂದ ಎರಡು ಪಟ್ಟು ದಂಡ ವಿಧಿಸುವುದು ಸೂಕ್ತ ಎಂದು ರೂ. 34,00,000/- ದಂಡ ಪಾವತಿಸಲು ಆದೇಶಿಸಿದರು. ಈ ಆದೇಶ ಭ್ರಷ್ಟಾಚಾರಿಗಳಲ್ಲಿ ನಡುಕ ಹುಟ್ಟಿಸಿದ್ದು,ಅಪರಾಧಿಯನ್ನು ನ್ಯಾಯಾಂಗ ಬಂದನಕ್ಕೆ ಒಪ್ಪಿಸಲಾಗಿದೆ.
ಮಂಗಳೂರು ಲೋಕಾಯುಕ್ತ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ, ನ್ಯಾಯವಾದಿ ಕೆ.ಎಸ್.ಎನ್. ರಾಜೇಶ್ ವಾದಿಸಿದ್ದರು.


