ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ ಬಿ.ಎಂ.ಕೃಷ್ಣೇಗೌಡ (80) ಮಂಗಳವಾರ ಮುಂಜಾನೆ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಏಪ್ರಿಲ್ 13ಕ್ಕೆ ಅವರಿಗೆ ಕೋವಿಡ್ ದೃಢಪಟ್ಟಿತ್ತು. 36 ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಅವರು ಗುಣಮುಖರಾಗಿ ಮನೆಗೆ ಮರಳಿದ್ದರು. ಆದರೆ ಮತ್ತೆ ಅನಾರೋಗ್ಯ ಕಾಣಿಸಿಕೊಂಡ ಕಾರಣ ಶನಿವಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದ ಅವರು ಮಂಗಳವಾರ ಮುಂಜಾನೆ 4.15ಕ್ಕೆ ಮೃತಪಟ್ಟಿದ್ದಾರೆ. ಕೃಷ್ಣೇಗೌಡ ಅವರ ಪುತ್ರ ಸತೀಶ್ ಎನ್ನುವವರು ಕಳೆದ ತಿಂಗಳು ಕೋವಿಡ್‌ನಿಂದ ಮೃತಪಟ್ಟಿದ್ದರು. ‘ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಾರಣ ಈ ವಿಷಯವನ್ನು ಅಪ್ಪನಿಗೆ ತಿಳಿಸಿರಲಿಲ್ಲ, ಕೊನೆಗೂ ಅಪ್ಪನಿಗೆ ಇದು ಹೇಳಲಾಗಲಿಲ್ಲ’ ಎಂದು ಪುತ್ರ ಮುರುಳೀಧರ್ ಹೇಳಿದರು.
ಕರ್ನಾಟಕ ರಾಜ್ಯದ ಅಕೌಂಟೆಂಟ್ ಜನರಲ್ ಕಚೇರಿಯಲ್ಲಿ ಉದ್ಯೋಗದಲ್ಲಿದ್ದುಕೊಂಡೇ ರಂಗಭೂಮಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದವರು ಕೃಷ್ಣೇಗೌಡರು. ಅಬ್ಬೂರು ಜಯತೀರ್ಥ, ಆರ್.ನಾಗೇಶ್, ಶ್ರೀನಿವಾಸ ಪ್ರಭು, ಡಾ.ಬಿ.ವಿ.ರಾಜಾರಾಂ, ಮುಂತಾದ ನಿರ್ದೇಶಕರ ನಿರ್ದೇಶನದಲ್ಲಿ ಅಭಿನಯಿಸಿದ್ದರು.
ಸಿ.ಆರ್.ಸಿಂಹ ಅವರ ನಿರ್ದೇಶನದ ‘ಸಿಂಹಾಸನ’ ಚಿತ್ರದ ಮೂಲಕ ಕನ್ನಡ ಸಿನಿಮಾ ರಂಗ ಪ್ರವೇಶಿಸಿದ ಇವರು ‘ಚಕ್ರವ್ಯೂಹ’, ‘ಹಾಲುಂಡ ತವರು’, ‘ಒಲವಿನ ಉಡುಗೊರೆ’, ‘ಸಂಸಾರ ನೌಕೆ’ ಹೀಗೆ 300ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಕರಿಮಲೆಯ ಕಗ್ಗತ್ತಲು’ ಚಿತ್ರಕ್ಕೆ ರಾಜ್ಯ ಪ್ರಶಸ್ತಿಯನ್ನೂ ಇವರು ಪಡೆದಿದ್ದರು. ʻಮುಖ್ಯಮಂತ್ರಿʼ ನಾಟಕದಲ್ಲಿನ ಪಾತ್ರ ಇವರಿಗೆ ಖ್ಯಾತಿ ತಂದಿತ್ತು.
ಕೃಷ್ಣೇಗೌಡರು ಕ್ರೀಡಾ ಕ್ಷೇತ್ರದಲ್ಲೂ ಹೆಸರು ಮಾಡಿದ್ದವರು. ರಾಜ್ಯಮಟ್ಟದ ಉತ್ತಮ ವಾಲಿಬಾಲ್ ಪಟು ಆಗಿದ್ದರು.


