ಹೈದರಾಬಾದ್: ತನಗೆ ಮಕ್ಕಳಾಗಿಲ್ಲ ಅನ್ನೋ ಚಿಂತೆಯಲ್ಲೇ ಮಹಿಳೆಯೊಬ್ಬಳು ಆಕ್ರೋಶಗೊಂಡು ಬಾವನ ಮಗುವನ್ನು ಮಹಡಿಯಿಂದ ಎಸೆದ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.
ತೆಲಂಗಾಣದ ಹೈದರಾಬಾದ್ನಲ್ಲಿ ಮೊಹಮ್ಮದ್ ಈತಶಾಮುದ್ದೀನ್ (32) ಮತ್ತು ಶುಜಾದ್ದೀನ್(27) ಹೆಸರಿನ ಅಣ್ಣ ತಮ್ಮ ಇಬ್ಬರೂ ಒಂದೇ ಕಟ್ಟಡದಲ್ಲಿ ವಾಸಿಸುತ್ತಿದ್ದರು. ಅದರಲ್ಲಿ ಶಾಮುದ್ದೀನ್ಗೆ ಮದುವೆಯಾಗಿ ಮೂರು ವರ್ಷದ ಮಗುವಿತ್ತು. ಶುಜಾದ್ದೀನ್ಗೆ ಒಂದು ವರ್ಷದ ಹಿಂದೆ ಐಶಾ(22) ಹೆಸರಿನ ಯುವತಿಯೊಂದಿಗೆ ಮದುವೆಯಾಗಿತ್ತು.ಮದುವೆಯಾಗಿ ಒಂದು ವರ್ಷವಾದರೂ ಐಶಾಗೆ ಗರ್ಭ ನಿಂತಿರಲಿಲ್ಲ. ಅದರಿಂದ ಆಕೆ ಸಾಕಷ್ಟು ನೊಂದಿದ್ದಳಂತೆ. ಶುಜಾದ್ದೀನ್ಗೆ ಅಣ್ಣನ ಮಗಳೆಂದರೆ ಎಲ್ಲಿಲ್ಲದ ಪ್ರೀತಿ. ಪ್ರತಿನಿತ್ಯ ಆಕೆಯೊಂದಿಗೆ ಆಟವಾಡುತ್ತಿರುತ್ತಿದ್ದನಂತೆ. ಪ್ರೀತಿಯಿಂದ ಮುದ್ದಾಡುತ್ತಿದ್ದನಂತೆ. ಆದರೆ ಅದನ್ನು ನೋಡಿದಾಗಲೆಲ್ಲ ಐಶಾ ಇನ್ನಷ್ಟು ಕುಗ್ಗಲಾರಂಭಿಸಿದ್ದಾಳೆ. ತಾನಿನ್ನೂ ತಾಯಿ ಆಗಿಲ್ಲ ಎನ್ನುವ ನೋವು ಹೆಚ್ಚಾಗಲಾರಂಭಿಸಿದೆ. ಅದೇ ನೋವಿನಿಂದ ಈ ಕೃತ್ಯ ಎಸಗಿದ್ದಾಳೆ.
ಮಗುವಿನ ಕೈಗಳನ್ನು ಕಟ್ಟಿ, ಎರಡನೇ ಮಹಡಿಯಿಂದ ಕೆಳಗೆ ದೂಡಿದ್ದಾಳೆ. ಕೆಳಗೆ ಬಿದ್ದ ಮಗುವಿಗೆ ಗಂಭೀರ ಗಾಯವಾಗಿದ್ದು, ಅದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ.


