ವಿಟ್ಲ : ಕೆಎಸ್ಸಾರ್ಟಿಸಿ ಬಸ್ ಚಾಲಕ ಮತ್ತ ಅಜಾಗರೂಕತೆಯಿಂದ ಬಸ್ ಚಲಾಯಿಸಿದ ಪರಿಣಾಮ ಬಸ್ಸಿನಲ್ಲಿದ್ದ ಮಹಿಳೆಯೋರ್ವರು ಹೊರಕ್ಕೆಸೆಯಲ್ಪಟ್ಟು ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡಿರುವ ಘಟನೆ ಬಂಟ್ವಾಳ ತಾಲೂಕಿನ ಕೇಪು ಗ್ರಾಮದ ಕರವೀರ ಅಂಗನವಾಡಿ ಬಳಿ ನಡೆದಿದೆ.
ಗಂಭೀರ ಗಾಯಗೊಂಡವರನ್ನು ಬಂಟ್ವಾಳ ತಾಲೂಕು ಕೇಪು ಗ್ರಾಮದ ಮೈರಕವೀರದವರಾದ ಪುಷ್ಪಾವತಿ ಎಂದು ಗುರುತಿಸಲಾಗಿದೆ. ಪುಷ್ಪಾವತಿ ಅವರು ಫೋಟೋ ತೆಗೆಸಲೆಂದು ವಿಟ್ಲ ಪೇಟೆಗೆ ತಮ್ಮ ಮಗಳು ಹಾಗೂ ಮೊಮ್ಮಗಳೊಂದಿಗೆ ಹೋಗಿ ವಾಪಸು ಮನೆಗೆ ಬರಲು ಕೆಎಸ್ಸಾರ್ಟಿಸಿ ಬಸ್ ಹತ್ತಿದ್ದರು. ಬಸ್ ಕರವೀರ ಅಂಗನವಾಡಿ ಬಳಿಯ ತಿರುವಿನಲ್ಲಿ ಚಾಲಕನ ನಿರ್ಲಕ್ಷ್ಯತನದಿಂದ ಬಸ್ ಚಲಾಯಿಸಿದ ಪರಿಣಾಮ ಸೀಟಿನಲ್ಲಿ ಕುಳಿತಿದ್ದ ಪುಷ್ಪಾವತಿಯವರು ಬಸ್ಸಿನಿಂದ ಹೊರಕ್ಕೆ ಎಸೆಯಲ್ಪಟ್ಟು ಡಾಂಬಾರು ರಸ್ತೆಗೆ ಬಿದ್ದಿದ್ದು, ಗಂಭೀರ ಗಾಯಗೊಂಡಿದ್ದಾರೆ.
ಅವರಿಗೆ ವಿಟ್ಲದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.


