ಹೈದರಾಬಾದ್: ವರ ಇನ್ನೇನು ತಾಳಿ ಕಟ್ಟುವಷ್ಟರಲ್ಲಿ ಪೊಲೀಸರಿಗೆ ವಧು ಕರೆ ಮಾಡಿ ವಿವಾಹವೊಂದು ಗೊಂದಲದ ಗೂಡಾಗಿ ಕೊನೆಗೆ ವರ ಅದೇ ಮಂಟಪದಲ್ಲಿ ಬೇರೆ ಯುವತಿಯನ್ನು ವರಿಸಿದ ಪ್ರಸಂಗ ತೆಲಂಗಾಣದ ಮೆಹಬೂಬಬಾದ್ ಜಿಲ್ಲೆಯಲ್ಲಿ ನಡೆದಿದೆ.
ಮೆಹಬೂಬಬಾದ್ನ ಮರಿಪಾದ ಮುನ್ಸಿಪಾಲಿಟಿ ಕೇಂದ್ರದ ಮದುವೆ ಮಂಟಪದಲ್ಲಿ ನಿನ್ನೆ ಈ ಘಟನೆ ನಡೆದಿದೆ. ಮರಿಪಾದ ಮಂಡಲದ ಗುಂಡೆಪುಡಿ ನಿವಾಸಿ ಯಾಮಿನಿ ಕೃಷ್ಣಮೂರ್ತಿ ಹಾಗೂ ಕುರವಿ ಮಂಡಲದ ಕಂಪೆಲ್ಲಿ ನಿವಾಸಿ ರಾಜೇಶ್ಗೂ ಹಿರಿಯರು ಮದು ನಿಶ್ಚಯಿಸಿದ್ದರು. ನಿಶ್ಚಯದಂತೆಯೇ ಮದುವೆ ಮಂಟಪದಲ್ಲಿ ಗುರುವಾರ ವಿವಾಹ ಕಾರ್ಯಕ್ರಮ ಜರುಗುತ್ತಿತ್ತು. ಬಂಧುಬಳಗ, ಅತಿಥಿಗಳೆಲ್ಲರೂ ಭಾಗಿಯಾಗಿದ್ದರು. ಮಂಟಪದಲ್ಲಿ ವಧು-ವರ ಕುಳಿತಿರುವಾಗ, ಪುರೋಹಿತರು ಪೂಜೆ ಪುನಸ್ಕಾರಗಳನ್ನು ನಡೆಸಿ ಇನ್ನೇನು ತಾಳಿ ಕಟ್ಟುವಷ್ಟರಲ್ಲಿ ಎದ್ದು ನಿಂತ ವಧು ನನಗೆ ಮದುವೆ ಇಷ್ಟವಿಲ್ಲ ಎಂದಿದ್ದಾಳೆ. ಬಳಿಕ ಪೊಲೀಸ್ ಸಹಾಯವಾಣಿ 100ಕ್ಕೆ ಕರೆ ಮಾಡಿ ತನ್ನ ವೃತ್ತಾಂತವನ್ನೆಲ್ಲ ವಿವರಿಸಿದ್ದಾಳೆ.
ವಧುವಿನ ಮಾತು ಕೇಳಿ ಮದುವೆ ಮಂಟಪಕ್ಕೆ ಓಡಿ ಬಂದ ಪೊಲೀಸರು ಆಕೆಯನ್ನು ಅಲ್ಲಿಂದ ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಕಂಪೆಲ್ಲಿ ಯುವಕನನ್ನು ಪ್ರೀತಿಸುತ್ತಿದ್ದು, ಆತನನ್ನೇ ಮದುವೆ ಆಗಲು ಬಯಸಿದ್ದೇನೆ. ಈ ವಿಚಾರ ಮನೆಯವರಿಗೆ ತಿಳಿದಿದ್ದರಿಂದ ನನಗೂ ಹೇಳದೆ ಬಲವಂತವಾಗಿ ಮದುವೆ ಮಾಡಲು ಮುಂದಾದರು ಎಂದು ಆರೋಪಿಸಿದ್ದಾಳೆ.
ಇತ್ತ ವಧುವಿನ ದಿಢೀರ್ ನಿರ್ಧಾರದಿಂದ ಒಂದು ಕ್ಷಣ ಶಾಕ್ ಆದ ವರ ಹೆಚ್ಚು ತೆಲೆಕೆಡಿಸಿಕೊಳ್ಳದೆ ತನ್ನ ಸಂಬಂಧಿಕರಲ್ಲೇ ಓರ್ವ ಯುವತಿಯನ್ನು ಅದೇ ಮಂಟಪದಲ್ಲಿ ಮದುವೆಯಾಗಿದ್ದಾನೆ. ವಿವಾಹಕ್ಕೆ ಬಂದಿದ್ದ ಅತಿಥಿಗಳು ನವವಧು-ವರರಿಗೆ ಆಶೀರ್ವದಿಸಿದರು.


