ಚೆನ್ನೈ : 90ರ ದಶಕದ ಬಹುತೇಕ ಮಕ್ಕಳ ಬಾಲ್ಯವನ್ನು ಚಂದವಾಗಿಸಿದರಲ್ಲಿ ಬಾಲಮಂಗಳ, ಚಂದಮಾಮದ ಪಾತ್ರ ಬಲು ದೊಡ್ಡದು. ಅದರಲ್ಲೂ ಚಂದಮಾಮದ ವಿಕ್ರಮಾದಿತ್ಯ ಬೇತಾಳನ ಕತೆಗಳು ಓದಿದಷ್ಟು ಮತ್ತೆ ಓದುವಂತೆ ಮಕ್ಕಳಲ್ಲಿ ಹುಚ್ಚು ಹಿಡಿಸಿತ್ತು. ಅಂದ್ಹಾಗೆ ಈ ಚಂದಮಾಮದಲ್ಲಿ ಬರುತ್ತಿದ್ದ ನೀತಿ ಕಥೆಗಳಷ್ಟೇ ಖುಷಿ ಕೊಡುತ್ತಿದ್ದದ್ದು ಅದರಲ್ಲಿರುತ್ತಿದ್ದ ಚಿತ್ರಗಳು.

ಆ ಚಿತ್ರಗಳನ್ನು ಬರೆಯುತ್ತಿದ್ದದ್ದು, ಚಿತ್ರ ಕಲಾವಿದ ಕೆ. ಸಿ. ಶಿವಶಂಕರ್. ಅವರು ಇಂದು ನಿಧನರಾಗಿದ್ದಾರೆ. ಅವರಿಗೆ 97 ವರ್ಷ ವಯಸ್ಸಾಗಿತ್ತು. ತಮ್ಮ 50 ವರ್ಷಗಳ ಚಿತ್ರಕಲಾ ಜೀವನದಲ್ಲಿ ಶಿವಶಂಕರ್ ಅವರು ಹಲವಾರು ಕಾರ್ಟೂನ್ ಚಿತ್ರಗಳನ್ನು ರಚಿಸಿದ್ದರು. ಅದರಲ್ಲಿ ಬಹಳ ಜನಪ್ರಿಯವಾಗಿದ್ದಿದ್ದು ‘ಚಂದಮಾಮ’ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ‘ವಿಕ್ರಮ ಮತ್ತು ಬೇತಾಳ’ಕ್ಕೆ ಶಿವಶಂಕರ್ ಅವರು ರಚಿಸುತ್ತಿದ್ದ ಚಿತ್ರಗಳು ಇಂದಿಗೂ ಅದೆಷ್ಟೋ ಮಂದಿಯ ನೆನಪಿನಂಗಳದಲ್ಲಿ ಅಚ್ಚಳಿಯದೇ ಉಳಿದಿದೆ.
‘ವಿಕ್ರಮ ಬೇತಾಳ’ದ ಚಿತ್ರಗಳಿಗೆ ಮನಸೋತು ಅವುಗಳನ್ನು ನಿಜ ಪಾತ್ರಗಳೆಂದೇ ಭ್ರಮಿಸಿ ಕಥೆಗಳನ್ನು ಓದುತ್ತಿದ್ದ ನೆನಪುಗಳು ಅನೇಕರ ಮನದಲ್ಲಿ ಇನ್ನೂ ಹಸಿರಾಗಿದ್ದರೆ ಅದಕ್ಕೆ ಪ್ರಮುಖ ಕಾರಣ ಶಿವಶಂಕರ್ ಅವರ ಕೈಯಲ್ಲಿ ಮೂಡಿಬರುತ್ತಿದ್ದ ಪರಿಣಾಮಕಾರಿ ಚಿತ್ರಗಳೆಂದರೆ ತಪ್ಪಾಗಲಾರದು. ‘ಚಂದಮಾಮ’ ಅಥವಾ ‘ಅಂಬುಲಿಮಾಮ’ ಎಂದೇ ಹೆಸರುವಾಸಿಯಾಗಿದ್ದ ಮಕ್ಕಳ ಕಾರ್ಟೂನ್ ಪತ್ರಿಕೆಯಲ್ಲಿ ಇವರು ರಚಿಸುತ್ತಿದ್ದ ವಿವಿಧ ಕಾರ್ಟೂನ್ ಗಳು ಆ ಕಾಲದ ಮಕ್ಕಳ ಅಚ್ಚುಮೆಚ್ಚಾಗಿತ್ತು.