ಹಾವೇರಿ: ಇವತ್ತು ಇಂದ್ರಜಿತ್ ಲಂಕೇಶ್ ಅವರು ಬಹಳ ದೊಡ್ಡ ಪ್ರಮಾಣದಲ್ಲಿ ಹೀರೋ ಆಗಲು ಹೊರಟಿದ್ದಾರೆ. ಅವರು ಫಿಲಂ ಲ್ಯಾಂಡ್ ಸುಧಾರಣೆಯಾಗಬೇಕು ಎನ್ನುತ್ತಿದ್ದಾರೆ. ಆದರೆ. ಅವರ ಸಹೋದರಿ ಗೌರಿ ಲಂಕೇಶ್ ಡ್ರಗ್ಸ್ ಅಡಿಕ್ಟ್ ಆಗಿದ್ದರು. ಆಗ ಅವರು ಎಲ್ಲಿ ಹೋಗಿದ್ದರು? ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ಇಂದ್ರಜಿತ್ ಲಂಕೇಶ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಹಾವೇರಿಯಲ್ಲಿ ಇಂದು ಸುದ್ದಿಗಾರರ ಜತೆ ಮಾತನಾಡಿದ ಪ್ರಮೋದ್ ಮುತಾಲಿಕ್, ಡ್ರಗ್ಸ್ ಜಾಲದ ಬಗ್ಗೆ ನೀವು ಮಾಹಿತಿ ಕೊಟ್ಟಿರಬಹುದು. ಅದಕ್ಕೆ ನಾನು ಧನ್ಯವಾದ ಹೇಳುತ್ತೇನೆ. ಆದ್ರೆ, ದಿವಂಗತ ಚಿರಂಜೀವಿ ಸರ್ಜಾ ಅವರ ಹೆಸರು ತೆಗೆದುಕೊಳ್ಳುವ ಅವಶ್ಯಕತೆ ಏನಿತ್ತು? ಎಂದು ಇಂದ್ರಜಿತ್ ಲಂಕೇಶ್ರನ್ನು ಪ್ರಶ್ನಿಸಿದ್ದಾರೆ.

ರಾಜ್ಯದಲ್ಲಿ ಡ್ರಗ್ಸ್-ಸೆಕ್ಸ್ ಮಾಫಿಯಾ ಕೆಲಸ ಮಾಡುತ್ತಿದೆ ಎಂದು 2009ರಲ್ಲೇ ನಾನು ಹೇಳಿದ್ದೆ. 2009ರಲ್ಲಿ ಒಂದು ಪಬ್ ಮೇಲೆ ದಾಳಿ ಮಾಡಿದ್ದೆವು, ಅವತ್ತು ಅಲ್ಲಿ ಡ್ರಗ್ಸ್ ಕೆಲಸ ಮಾಡುತ್ತಿತ್ತು. ಸರ್ಕಾರ ಆ ವಿಷಯದ ಬಗ್ಗೆ ಹೆಚ್ಚು ಒತ್ತು ಕೊಡದೆ ನನ್ನನ್ನು ಟಾರ್ಗೆಟ್ ಮಾಡಿಕೊಂಡಿತ್ತು ಎಂದು ವಾಗ್ದಾಳಿ ನಡೆಸಿದರು.
‘ನಮ್ಮ ಕೈಯಲ್ಲಿ ಹುಡುಕೋಕೆ ಆಗಿಲ್ಲ’ ಎಂದು ಪೊಲೀಸ್ ಹೇಳಲಿ. ಡ್ರಗ್ಸ್ ಮಾಫಿಯಾದವರು ಎಲ್ಲೆಲ್ಲಿದ್ದಾರೆಂದು ನಾನು ತೋರಿಸುತ್ತೇನೆ ಎಂದು ಪೊಲೀಸರಿಗೆ ಸವಾಲು ಹಾಕಿದ ಪ್ರಮೋದ್ ಮುತಾಲಿಕ್, ‘ಹ್ಯಾರಿಸ್ ಪುತ್ರ ಕೂಡ ಈ ಮಾಫಿಯಾದಲ್ಲಿದ್ದಾನೆ’ ಎಂದು ಹೊಸ ಬಾಂಬ್ ಸಿಡಿಸಿದರು.


