
ಮಂಗಳೂರು: ನಗರದ ಕದ್ರಿ ಯುದ್ಧ ಸ್ಮಾರಕದ ಬಳಿ ಸಾರ್ವಜನಿಕರ ವೀಕ್ಷಣೆಗಾಗಿ ಇರಿಸಲಾಗಿರುವ ಐತಿಹಾಸಿಕ ಯುದ್ಧ ಟ್ಯಾಂಕ್ ಮೇಲೆ ಇಬ್ಬರು ಯುವಕರು ಹತ್ತಿ ಅಸಭ್ಯವಾಗಿ ವರ್ತಿಸಿರುವ ಘಟನೆ ಬೆಳಕಿಗೆ ಬಂದಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಮಂಗಳೂರು ಸರ್ಕಿಟ್ ಹೌಸ್ ಮುಂಭಾಗದ ಕದ್ರಿ ಯುದ್ಧ ಸ್ಮಾರಕದ ಆವರಣದಲ್ಲಿ, 1971ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ಪಾಲ್ಗೊಂಡಿದ್ದ ಐತಿಹಾಸಿಕ ‘ಟಿ-55’ (T-55) ಯುದ್ಧ ಟ್ಯಾಂಕನ್ನು ಎತ್ತರದ ವೇದಿಕೆಯ ಮೇಲೆ ಸ್ಮಾರಕವಾಗಿ ಇರಿಸಲಾಗಿದೆ. ರಾತ್ರಿ ವೇಳೆ ಈ ಟ್ಯಾಂಕ್ ಮೇಲೆ ಹತ್ತಿರುವ ಇಬ್ಬರು ಯುವಕರು, ಅದರ ಮೇಲ್ಭಾಗದ ಹ್ಯಾಚ್ ತೆರೆದು ಒಳಗೆ ಪ್ರವೇಶಿಸಿ ಅಸಭ್ಯವಾಗಿ ವರ್ತಿಸಿದ್ದಾರೆ ಎನ್ನಲಾಗಿದೆ.
ತಮ್ಮ ಈ ಕಿಡಿಗೇಡಿತನದ ಕೃತ್ಯವನ್ನು ಯುವಕರು ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು, ಸದ್ಯ ಈ ದೃಶ್ಯಗಳು ವೈರಲ್ ಆಗಿವೆ. ದೇಶದ ಸೈನಿಕರ ಶೌರ್ಯದ ಸಂಕೇತವಾಗಿರುವ ಯುದ್ಧ ಸ್ಮಾರಕಕ್ಕೆ ಅಗೌರವ ತೋರಿದ ಯುವಕರ ವರ್ತನೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ಕದ್ರಿ ಪೊಲೀಸ್ ಠಾಣೆಯ ಎದುರಿನಲ್ಲೇ ಈ ಘಟನೆ ನಡೆದಿದ್ದು, ವೈರಲ್ ವಿಡಿಯೋ ಆಧರಿಸಿ ಕಿಡಿಗೇಡಿ ಯುವಕರನ್ನು ತಕ್ಷಣವೇ ಪತ್ತೆ ಹಚ್ಚಿ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.


