Thursday, November 19, 2026
Homeಕರಾವಳಿಮಂಗಳೂರುಮಂಗಳೂರು:ನಕಲಿ ದಾಖಲೆ ನೀಡಿ ಸೊಸೈಟಿಗೆ ₹32 ಲಕ್ಷ ವಂಚನೆ: ಆರೋಪಿಗೆ ಒಂದು ವರ್ಷ ಜೈಲು ಶಿಕ್ಷೆ

ಮಂಗಳೂರು:ನಕಲಿ ದಾಖಲೆ ನೀಡಿ ಸೊಸೈಟಿಗೆ ₹32 ಲಕ್ಷ ವಂಚನೆ: ಆರೋಪಿಗೆ ಒಂದು ವರ್ಷ ಜೈಲು ಶಿಕ್ಷೆ

- Advertisement -
- Advertisement -

ಮಂಗಳೂರು: ನಕಲಿ ಜಮೀನು ದಾಖಲೆಗಳನ್ನು ಸಲ್ಲಿಸಿ ಮಂಗಳೂರು ಕೋ-ಆಪರೇಟಿವ್ ಬಿಲ್ಡಿಂಗ್ ಸೊಸೈಟಿಗೆ ಸುಮಾರು 32 ಲಕ್ಷ ರೂ. ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಂಗಳೂರಿನ 2ನೇ ಜೆಎಂಎಫ್‌ಸಿ ನ್ಯಾಯಾಲಯವು ಅಪರಾಧಿಗೆ ಒಂದು ವರ್ಷ ಕಾರಾಗೃಹ ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ಮಂಗಳೂರಿನ ಬಜಾಲ್ ನಿವಾಸಿ ಕಿಶೋರ್ ಭಂಡಾರಿ ಶಿಕ್ಷೆಗೊಳಗಾದ ಅಪರಾಧಿ.

ಪ್ರಕರಣದ ವಿವರ: 2011ರ ಮಾರ್ಚ್ 3ರಂದು ಕೆ.ಎಸ್. ರಾವ್ ರಸ್ತೆಯಲ್ಲಿರುವ ಮಂಗಳೂರು ಕೋ-ಆಪರೇಟಿವ್ ಬಿಲ್ಡಿಂಗ್ ಸೊಸೈಟಿಗೆ ತೆರಳಿದ್ದ ಕಿಶೋರ್ ಭಂಡಾರಿ, ಬಜಾಲ್ ಗ್ರಾಮದ ಸರ್ವೆ ನಂಬರ್ 71-4ಎ ಮತ್ತು 71-3ಇ ರಲ್ಲಿರುವ ಒಟ್ಟು 75 ಸೆಂಟ್ಸ್ ಜಮೀನಿನ ದಾಖಲೆಗಳನ್ನು ನೀಡಿ 32 ಲಕ್ಷ ರೂ. ಸಾಲ ಪಡೆದುಕೊಂಡಿದ್ದ. ಆದರೆ, ಈ ಪೈಕಿ 50.5 ಸೆಂಟ್ಸ್ ಜಾಗವನ್ನು ಆತ ಈಗಾಗಲೇ ಮಾರಾಟ ಮಾಡಿದ್ದು, ಅದರ ನಕಲಿ ದಾಖಲೆಗಳನ್ನು ಸೊಸೈಟಿಗೆ ಸಲ್ಲಿಸಿರುವುದು ಬಳಿಕ ಬೆಳಕಿಗೆ ಬಂದಿತ್ತು.

ಸಾಲ ಪಡೆದ ನಂತರ ಯಾವುದೇ ಕಂತುಗಳನ್ನು ಮರುಪಾವತಿಸದೆ ವಂಚಿಸಿದ್ದ ಆರೋಪಿಯು, ಬಡ್ಡಿ ಸೇರಿದಂತೆ ಸೊಸೈಟಿಗೆ ಒಟ್ಟು 49,25,087 ರೂ. ಬಾಕಿ ಉಳಿಸಿಕೊಂಡಿದ್ದ. ಈ ಕುರಿತು ಸೊಸೈಟಿಯ ಶಾಖಾ ಕಾರ್ಯದರ್ಶಿ ಪದ್ಮನಾಭ ಕೆ. ಅವರು ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣದ ತನಿಖೆ ನಡೆಸಿದ್ದ ಪೊಲೀಸ್ ಉಪನಿರೀಕ್ಷಕ ಕೆ.ಕೆ. ರಾಮಕೃಷ್ಣ ಅವರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ಮಂಗಳೂರಿನ 2ನೇ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ಶಶಿಕಲಾ ಜೆ. ಅವರು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಒಂದು ವರ್ಷ ಜೈಲು ಹಾಗೂ 10 ಸಾವಿರ ರೂ. ದಂಡ ವಿಧಿಸಿದ್ದಾರೆ. ದಂಡ ಪಾವತಿಸಲು ವಿಫಲವಾದಲ್ಲಿ ಹೆಚ್ಚುವರಿ ಮೂರು ತಿಂಗಳ ಜೈಲು ಶಿಕ್ಷೆ ಅನುಭವಿಸುವಂತೆ ಆದೇಶದಲ್ಲಿ ತಿಳಿಸಿದ್ದಾರೆ. ಪ್ರಕರಣದಲ್ಲಿ ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕರಾದ ಸುಮಂಗಲಾ ಚಂದ್ರಶೇಖರ ನಾಯಕ್ ಅವರು ವಾದ ಮಂಡಿಸಿದ್ದರು.

- Advertisement -

Latest News

error: Content is protected !!