
ಉಡುಪಿ:ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ಮೊಬೈಲ್ ಫೋನ್ಗಳನ್ನು ಕಳವು ಮಾಡುತ್ತಿದ್ದ ಸರಣಿ ಕಳ್ಳನನ್ನು ಬೈಂದೂರು ಪೊಲೀಸರು ಬಂಧಿಸಿದ್ದು, ಆತನಿಂದ 3 ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಸಾಸ್ತಾನ ಐರೋಡಿ ಗ್ರಾಮದ ಗೋಳಿಬೆಟ್ಟು ನಿವಾಸಿ ಪ್ರಹ್ಲಾದ್ (32) ಬಂಧಿತ ಆರೋಪಿ. ಆಗಸ್ಟ್ 2ರಂದು ಮಂಗಳೂರಿನಿಂದ ಮಡಗಾಂವ್ಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ರೂಬೆನ್ ಫೆರ್ನಾಂಡಿಸ್ ಅವರ ₹17,000 ಮೌಲ್ಯದ ಮೊಬೈಲ್ ಕಳವು ಮಾಡಿದ್ದ ಆರೋಪಿ, ಅದರ ಮೂಲಕ ಯುಪಿಐ (UPI) ಮುಖಾಂತರ ₹19,847 ಹಣವನ್ನು ಅಕ್ರಮವಾಗಿ ವರ್ಗಾಯಿಸಿಕೊಂಡಿದ್ದನು.
ದೂರಿನ ಮೇರೆಗೆ ತನಿಖೆ ನಡೆಸಿದ ಬೈಂದೂರು ವೃತ್ತ ನಿರೀಕ್ಷಕ ಶಿವಕುಮಾರ್ ಬಿ. ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿದೆ. ವಿಚಾರಣೆ ವೇಳೆ, ಸಹಚರ ಜೋಶಿ ನಾರಾಯಣ ನಾಯಕ್ ಜೊತೆ ಸೇರಿ ಬೈಂದೂರು ಸಮೀಪ ರೈಲುಗಳಲ್ಲಿ ಹಲವು ಮೊಬೈಲ್ ಕಳವು ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ. ಬಂಧಿತನಿಂದ ಐಫೋನ್ 16 ಪ್ರೋ ಮ್ಯಾಕ್ಸ್ ಸೇರಿದಂತೆ ಒಟ್ಟು 3 ಮೊಬೈಲ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿ ವಿರುದ್ಧ ಕಾರವಾರ, ಬಂಟ್ವಾಳ, ಉಡುಪಿ, ಬ್ರಹ್ಮಾವರ, ಕೋಟಾ ಹಾಗೂ ಕುಂದಾಪುರ ಠಾಣೆಗಳಲ್ಲೂ ಹಲವು ಕಳ್ಳತನ ಪ್ರಕರಣಗಳು ದಾಖಲಾಗಿವೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.


