
ಮಂಗಳೂರು: ಸಾರ್ವಜನಿಕರಿಗೆ ಶುಚಿ ಮತ್ತು ಸುರಕ್ಷಿತ ಆಹಾರ ಲಭ್ಯವಾಗುವುದನ್ನು ಖಚಿತಪಡಿಸಿಕೊಳ್ಳಲು ಆಹಾರ ಸುರಕ್ಷತಾ ಇಲಾಖೆಯ ಐದು ವಿಶೇಷ ತಂಡಗಳು ಮಂಗಳೂರು ನಗರದ ವಿವಿಧ ಹೋಟೆಲ್, ರೆಸ್ಟೋರೆಂಟ್ ಹಾಗೂ ಆಹಾರ ತಯಾರಿಕಾ ಘಟಕಗಳ ಮೇಲೆ ಅನಿರೀಕ್ಷಿತ ದಾಳಿ ನಡೆಸಿ ಪರಿಶೀಲಿಸಿವೆ.
ಎಂ.ಆರ್. ಸ್ವೀಟ್ಸ್ ವಿರುದ್ಧ ಪ್ರಕರಣ: ತೊಕ್ಕೊಟ್ಟು ಸಮೀಪದ ಸೇವಂತಿಗುಡ್ಡೆಯಲ್ಲಿರುವ ‘ಎಂ.ಆರ್. ಸ್ವೀಟ್ಸ್’ ಸಿಹಿತಿಂಡಿ ತಯಾರಿಕಾ ಘಟಕದ ಮೇಲೆ ಅಧಿಕಾರಿಗಳು ದಾಳಿ ನಡೆಸಿದಾಗ, ಅತ್ಯಂತ ಕಲುಷಿತ ವಾತಾವರಣದಲ್ಲಿ ಕನಿಷ್ಠ ನೈರ್ಮಲ್ಯವನ್ನೂ ಪಾಲಿಸದೆ ಸಿಹಿತಿಂಡಿ ಹಾಗೂ ಆಹಾರ ಪದಾರ್ಥಗಳನ್ನು ತಯಾರಿಸುತ್ತಿರುವುದು ಪತ್ತೆಯಾಗಿದೆ. ತಕ್ಷಣವೇ ಅಲ್ಲಿದ್ದ ಅಸುರಕ್ಷಿತ ಆಹಾರ ಸಾಮಗ್ರಿಗಳನ್ನು ಜಪ್ತಿ ಮಾಡಿರುವ ಅಧಿಕಾರಿಗಳು, ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲು ಕ್ರಮ ಕೈಗೊಂಡಿದ್ದಾರೆ.
ಐಡಿಯಲ್ ಐಸ್ ಕ್ರೀಮ್ ಘಟಕಕ್ಕೆ ನೋಟಿಸ್: ಕೊಲ್ಯದಲ್ಲಿರುವ ‘ಐಡಿಯಲ್ ಐಸ್ ಕ್ರೀಮ್ಸ್’ ಕೋಲ್ಡ್ ಸ್ಟೋರೇಜ್ ಘಟಕಕ್ಕೆ ಭೇಟಿ ನೀಡಿದ ತಂಡವು ಶೇಖರಣಾ ಮಾನದಂಡಗಳನ್ನು ಪರಿಶೀಲಿಸಿತು. ಈ ವೇಳೆ ಕಂಡುಬಂದ ಕೆಲವು ಲೋಪದೋಷಗಳನ್ನು ತಕ್ಷಣ ಸರಿಪಡಿಸಿಕೊಳ್ಳುವಂತೆ ಘಟಕದ ಆಡಳಿತ ಮಂಡಳಿಗೆ ನೋಟಿಸ್ ಜಾರಿ ಮಾಡಲಾಗಿದೆ.


