
ಬಂಟ್ವಾಳ : ವ್ಯಾಪಾರದ ಹಣ ಸಂಗ್ರಹಿಸಿ ಬೈಕ್‌ನಲ್ಲಿ ಬರುತ್ತಿದ್ದ ಸಿಬ್ಬಂದಿಗೆ ತಲವಾರು ತೋರಿಸಿ ಬೆದರಿಸಿ, ₹8.35 ಲಕ್ಷ ನಗದು ದರೋಡೆಗೈದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಂಗಳೂರು ಶಕ್ತಿನಗರ ನಿವಾಸಿ ಪ್ರವಿತ್ ಶೆಟ್ಟಿ (ಪ್ರವಿತ್ ರಾಜ್ ಶೆಟ್ಟಿ), ಉಳ್ಳಾಲ ಕೋಡಿ ನಿವಾಸಿ ಉಮ್ಮರ್ ಫಾರೂಕ್ ಹಾಗೂ ಉಳ್ಳಾಲ ಹರೇಕಳ ನಿವಾಸಿ ಶಾಕೀರ್ ಬಂಧಿತ ಆರೋಪಿಗಳು. ಬಂಧಿತರಿಂದ ₹2,01,000 ನಗದು ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಘಟನೆಯ ಹಿನ್ನೆಲೆ: ಮಂಗಳೂರಿನ ಕಣ್ಣೂರಿನಲ್ಲಿರುವ ಸಿಮೆಂಟ್ ಹಾಗೂ ಕಬ್ಬಿಣ ಮಾರಾಟ ಸಂಸ್ಥೆಯ ಉದ್ಯೋಗಿ ಮಯ್ಯದಿ (40) ಎಂಬವರು, ಕಳೆದ ಆ. 20ರಂದು ವಿವಿಧ ಅಂಗಡಿಗಳಿಂದ ಸಂಸ್ಥೆಯ ವ್ಯವಹಾರದ ಹಣವನ್ನು ಸಂಗ್ರಹಿಸಿಕೊಂಡು ಬೈಕ್‌ನಲ್ಲಿ ಕಕ್ಕೆಪದವಿನಿಂದ ಪಾಣೆಮಂಗಳೂರಿಗೆ ಬರುತ್ತಿದ್ದರು. ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಮುಲ್ಕಾಜೆ ಮಾಡ ಎಂಬಲ್ಲಿಗೆ ತಲುಪಿದಾಗ, ಎರಡು ಬೈಕ್‌ಗಳಲ್ಲಿ ಬಂದ ನಾಲ್ವರು ಅಪರಿಚಿತರು ಮಯ್ಯದಿ ಅವರನ್ನು ಅಡ್ಡಗಟ್ಟಿ ತಲವಾರು ತೋರಿಸಿ ಬೆದರಿಸಿ, ಅವರ ಬಳಿಯಿದ್ದ ₹8,35,000 ನಗದು ದರೋಡೆ ಮಾಡಿ ಪರಾರಿಯಾಗಿದ್ದರು. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪೊಲೀಸ್ ಕಾರ್ಯಾಚರಣೆ: ಪ್ರಕರಣದ ತನಿಖೆ ಕೈಗೆತ್ತಿಕೊಂಡ ಬಂಟ್ವಾಳ ಗ್ರಾಮಾಂತರ ಪೊಲೀಸ್ ನಿರೀಕ್ಷಕ ಸೀತಾರಾಮ ಪಿ. ಹಾಗೂ ಅವರ ತಂಡವು ಕಾರ್ಯಾಚರಣೆ ನಡೆಸಿ, ನ. 11ರಂದು ಮೂವರು ಆರೋಪಿಗಳನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಹೆಚ್ಚಿನ ವಿಚಾರಣೆಗಾಗಿ ನ. 16ರವರೆಗೆ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದಾಗ ₹2.01 ಲಕ್ಷ ನಗದು ಪತ್ತೆಯಾಗಿದ್ದು, ಅದನ್ನು ವಶಪಡಿಸಿಕೊಳ್ಳಲಾಗಿದೆ.
ಸದ್ಯ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಪ್ರಮುಖ ಆರೋಪಿ ಪ್ರವಿತ್ ರಾಜ್ ಶೆಟ್ಟಿ ಎಂಬಾತನ ಗುರುತು ಪತ್ತೆ ಪರೇಡ್ (Identification Parade) ನಡೆಸಲಾಗಿದೆ. ಪ್ರಕರಣದ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.


