
ಉಡುಪಿ:ಚೂಡಿದಾರದ ಶಾಲಿನಿಂದ ಪರಸ್ಪರ ಕೈಗಳನ್ನು ಬಿಗಿದುಕೊಂಡು ದಂಪತಿಯೊಬ್ಬರು ಸೀತಾ ನದಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಶನಿವಾರ ರಾತ್ರಿ ಮಾಬುಕಳದಲ್ಲಿ ನಡೆದಿದೆ. ತುಮಕೂರು ಜಿಲ್ಲೆಯ ನಿವಾಸಿಗಳಾದ ಶ್ರೀನಿವಾಸ್ ಮೂರ್ತಿ ಎಚ್. (52) ಹಾಗೂ ಗಂಗಾ (48) ಮೃತ ದಂಪತಿ.
ಒಂದು ವಾರದ ಹಿಂದೆ ಕರಾವಳಿ ಹಾಗೂ ಮಲೆನಾಡು ಭಾಗದ ವಿವಿಧ ತೀರ್ಥಕ್ಷೇತ್ರಗಳ ದರ್ಶನಕ್ಕಾಗಿ ಈ ದಂಪತಿ ಆಗಮಿಸಿದ್ದರು ಎನ್ನಲಾಗಿದೆ. ಶನಿವಾರ ಮುರ್ಡೇಶ್ವರ ಹಾಗೂ ಸಿಗಂದೂರು ಕ್ಷೇತ್ರಗಳಿಗೆ ಭೇಟಿ ನೀಡಿದ್ದ ಅವರು, ಸಂಜೆಯ ವೇಳೆಗೆ ಮಾಬುಕಳ ಪರಿಸರದಲ್ಲಿ ಸುತ್ತಾಡುತ್ತಿದ್ದರು. ಬಳಿಕ ರಾತ್ರಿ ಮಾಬುಕಳ ಸೇತುವೆಯಿಂದ ಸೀತಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಾಹಿತಿ ತಿಳಿದು ತಕ್ಷಣವೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಶನಿವಾರ ರಾತ್ರಿ ಶೋಧ ಕಾರ್ಯಾಚರಣೆ ನಡೆಸಿದರಾದರೂ ದಂಪತಿ ಪತ್ತೆಯಾಗಿರಲಿಲ್ಲ. ಭಾನುವಾರ ಪಾಂಡೇಶ್ವರ ಮಠದ ತೋಟದ ಸಮೀಪ ಇಬ್ಬರ ಮೃತದೇಹಗಳು ಪತ್ತೆಯಾಗಿದ್ದು, ಆತ್ಮಹತ್ಯೆಗೂ ಮುನ್ನ ಶಾಲಿನಿಂದ ಇಬ್ಬರೂ ಕೈಗಳನ್ನು ಕಟ್ಟಿಕೊಂಡಿರುವುದು ಕಂಡುಬಂದಿದೆ.
ಮೃತ ಶ್ರೀನಿವಾಸ್ ಮೂರ್ತಿ ಅವರಿಗೆ ಇಬ್ಬರು ಪತ್ನಿಯರಿದ್ದು, ಗಂಗಾ ಅವರು ಕಿರಿಯ ಪತ್ನಿಯಾಗಿದ್ದರು ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಕೋಟ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಭಾನುವಾರ ರಾತ್ರಿ ಕುಂದಾಪುರಕ್ಕೆ ಆಗಮಿಸಿದ ಕುಟುಂಬಸ್ಥರು ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ್ದು, ಕೋಟ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.


