Monday, November 16, 2026
Homeಕರಾವಳಿಮಂಗಳೂರುವಿದ್ಯಾದೇಗುಲದಲ್ಲಿ ದ್ವೇಷದ ಭಾಷಣ ಸಲ್ಲದು; ಮಕ್ಕಳಿಗೆ ಶಿಕ್ಷಣದ ಮಹತ್ವದ ಬಗ್ಗೆ ಹೇಳಿ ದ್ವೇಷವನ್ನಲ್ಲ: ಕೆಪಿಸಿಸಿ ಪ್ರಧಾನ...

ವಿದ್ಯಾದೇಗುಲದಲ್ಲಿ ದ್ವೇಷದ ಭಾಷಣ ಸಲ್ಲದು; ಮಕ್ಕಳಿಗೆ ಶಿಕ್ಷಣದ ಮಹತ್ವದ ಬಗ್ಗೆ ಹೇಳಿ ದ್ವೇಷವನ್ನಲ್ಲ: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ

- Advertisement -
- Advertisement -

ಬೆಳ್ತಂಗಡಿ: “ಶಾಲೆ ಎನ್ನುವುದು ಮಕ್ಕಳಿಗೆ ಜ್ಞಾನ, ಸಂಸ್ಕಾರ, ಮಾನವೀಯತೆ ಮತ್ತು ಸಹಬಾಳ್ವೆಯ ಪಾಠ ಕಲಿಸುವ ಪವಿತ್ರ ಸ್ಥಳವೇ ಹೊರತು, ಅದು ಯಾವುದೇ ರಾಜಕೀಯ ಪಕ್ಷದ ಪ್ರಚಾರ ವೇದಿಕೆಯಲ್ಲ” ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.


ಪುಂಜಾಲಕಟ್ಟೆ ಶಾಲಾ ಆವರಣದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜರಿಂದ ನಡೆದ ರಾಜಕೀಯ ಪ್ರೇರಿತ ಭಾಷಣವು ದ್ವೇಷ ಭಾವನೆಯಿಂದ ಕೂಡಿದೆ “ಮಕ್ಕಳ ಕೈಯಲ್ಲಿ ಪುಸ್ತಕಗಳಿರಬೇಕೇ ಹೊರತು ರಾಜಕೀಯ ದ್ವೇಷದ ವಿಷಬೀಜಗಳಲ್ಲ. ಅವರ ಮನಸ್ಸಿನಲ್ಲಿ ಪ್ರಶ್ನಿಸುವ ಜಿಜ್ಞಾಸೆ, ಪ್ರೀತಿಸುವ ಹೃದಯ ಮತ್ತು ಭವಿಷ್ಯದ ಕನಸುಗಳು ಬೆಳೆಯಬೇಕೇ ಹೊರತು ಪಕ್ಷಪಾತದ ಮನೋಭಾವವಲ್ಲ” ಎಂದು ಅಭಿಪ್ರಾಯಪಟ್ಟಿದ್ದಾರೆ.
“ಜ್ಞಾನದ ಮಂದಿರದಲ್ಲಿ ನಿಂತು ಮುಗ್ಧ ಮಕ್ಕಳ ಮುಂದೆ ವಿರೋಧ ಪಕ್ಷದ ವಿರುದ್ಧ ದ್ವೇಷದ ಮಾತುಗಳನ್ನಾಡುವುದು ಯಾವ ಸಂಸ್ಕಾರ ಮತ್ತು ಯಾವ ರಾಜಕೀಯ ಪ್ರಬುದ್ಧತೆ?” ಎಂದು ಪ್ರಶ್ನಿಸಿರುವ ಅವರು, ರಾಜಕೀಯದಲ್ಲಿ ಭಿನ್ನಾಭಿಪ್ರಾಯಗಳು ಸಹಜವಾದರೂ ಅವುಗಳನ್ನು ಶಾಲಾ ಮಕ್ಕಳ ಮನಸ್ಸಿಗೆ ತುಂಬುವ ಹಕ್ಕು ಯಾರಿಗೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.


“ಶಾಲೆಗಳು ರಾಜಕೀಯ ದ್ವೇಷ ಬಿತ್ತುವ ಜಾಗಗಳಲ್ಲ; ಅವು ಭವಿಷ್ಯದ ಭಾರತವನ್ನು ಕಟ್ಟುವ ದೇವಾಲಯಗಳು. ರಾಜಕೀಯ ಲಾಭಕ್ಕಾಗಿ ಮಕ್ಕಳ ಭವಿಷ್ಯವನ್ನು ಬಲಿಕೊಡದೆ, ಶಾಲಾ ಆವರಣದ ಪಾವಿತ್ರ್ಯವನ್ನು ಕಾಪಾಡಬೇಕು. ಮಕ್ಕಳಿಗೆ ಶಿಕ್ಷಣ ನೀಡಿ, ದ್ವೇಷವನ್ನಲ್ಲ” ಎಂದು ರಕ್ಷಿತ್ ಶಿವರಾಂ ತಮ್ಮ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

- Advertisement -

Latest News

error: Content is protected !!