
ಪುತ್ತೂರು: ಮನೆಯ ಅಂಗಳಕ್ಕೆ ಅಕ್ರಮವಾಗಿ ಪ್ರವೇಶಿಸಿ ಬಾಲಕನೊಬ್ಬನ ಮೇಲೆ ಹಲ್ಲೆ ನಡೆಸಿರುವುದಲ್ಲದೆ, ಜಗಳ ಬಿಡಿಸಲು ಬಂದ ತಾಯಿ ಮತ್ತು ತಂಗಿಯನ್ನೂ ದೂಡಿ ಹಾಕಿರುವ ಕುರಿತು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಕ್ಟೋಬರ್ 5ರ ರಾತ್ರಿ ಸಂತ್ರಸ್ತ ಬಾಲಕ ತನ್ನ ಮನೆಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ, ಪರಿಚಯಸ್ಥರಾದ ಸುಧಾಕರ, ಪೇರಿಗೇರಿ ಚಂದ್ರ ಹಾಗೂ ಹರೀಶ್ ಎಂಬವರು ರಸ್ತೆ ಬದಿಯಲ್ಲಿ ನಿಂತು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾಗಿದೆ. ಇದಾದ ಕೆಲವೇ ಹೊತ್ತಿನಲ್ಲಿ ಈ ಮೂವರೊಂದಿಗೆ ವಸಂತಿ, ಮೋಹನ್, ಗೋವಚಂದ್ರ, ಟಿ.ಸಿ. ಚಂದ್ರ, ಪ್ರಮೀಳ ಹಾಗೂ ಸುಮ ಎಂಬವರು ಸೇರಿ ಬಾಲಕನ ಮನೆಯ ಅಂಗಳಕ್ಕೆ ಬಂದು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಈ ವೇಳೆ ಹಲ್ಲೆಯನ್ನು ತಡೆಯಲು ಮುಂದಾದ ಬಾಲಕನ ತಾಯಿ ಹಾಗೂ ತಂಗಿಯ ಮೇಲೂ ಆರೋಪಿಗಳು ಹಲ್ಲೆ ನಡೆಸಿ ದೂಡಿ ಹಾಕಿದ್ದಾರೆ. ಘಟನೆಯಲ್ಲಿ ಗಾಯಗೊಂಡಿರುವ ಬಾಲಕ ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾನೆ ಎಂದು ಸಂತ್ರಸ್ತನ ತಾಯಿ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ದೂರಿನ ಅನ್ವಯ ಪುತ್ತೂರು ಗ್ರಾಮಾಂತರ ಪೊಲೀಸರು ನವೆಂಬರ್ 11ರಂದು (ಅ.ಕ್ರ: 140/2026) ಭಾರತೀಯ ನ್ಯಾಯ ಸಂಹಿತೆ (BNS) ವಿವಿಧ ಕಲಂಗಳು ಹಾಗೂ ಬಾಲ ನ್ಯಾಯ ಕಾಯ್ದೆಯಡಿ (JJ Act) 9 ಮಂದಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.


