
ಕಾರ್ಕಳ: ಬೆಳ್ಮಣ್ನಲ್ಲಿ ಬೈಕ್ ಮತ್ತು ಟಿಪ್ಪರ್ ಲಾರಿ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 19 ವರ್ಷದ ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಶನಿವಾರ (ನ.14) ನಡೆದಿದೆ. ಪಿಲಾರು ಗ್ರಾಮದ ಕುಂಜಿಗುಡ್ಡೆ ನಿವಾಸಿ ತ್ರಿಶಾಂತ್ ಅಲಿಯಾಸ್ ಪುನೀತ್ (19) ಮೃತ ದುರ್ದೈವಿ. ಸ್ಥಳೀಯವಾಗಿ ‘ಡಿಜೆ’ ಆಗಿ ಗುರುತಿಸಿಕೊಂಡಿದ್ದ ಪುನೀತ್, ಪ್ರತಿಭಾನ್ವಿತ ಯುವಕನಾಗಿದ್ದರು.
ಶನಿವಾರ ಪುನೀತ್ ಅವರು ಬೆಳ್ಮಣ್ನಿಂದ ಪಿಲಾರು ಕಡೆಗೆ ಬೈಕ್ನಲ್ಲಿ ತೆರಳುತ್ತಿದ್ದರು. ಈ ವೇಳೆ ಬೆಳ್ಮಣ್ ಸೊಸೈಟಿ ಮುಂಭಾಗದ ರಸ್ತೆಯಲ್ಲಿ ತಿರುವು ಪಡೆಯಲು ನಿಲ್ಲಿಸಿದ್ದ ಟಿಪ್ಪರ್ ಲಾರಿಯ ಮುಂಭಾಗಕ್ಕೆ ಇವರ ಬೈಕ್ ರಭಸವಾಗಿ ಢಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.
ಢಿಕ್ಕಿಯ ತೀವ್ರತೆಗೆ ಪುನೀತ್ ಬೈಕ್ನಿಂದ ರಸ್ತೆಗೆ ಎಸೆಯಲ್ಪಟ್ಟಿದ್ದು, ತಲೆಗೆ ತೀವ್ರ ಪೆಟ್ಟು ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಸ್ಥಳೀಯರು ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲು ಯತ್ನಿಸಿದರಾದರೂ, ಮಾರ್ಗಮಧ್ಯೆ ಅವರು ಕೊನೆಯುಸಿರೆಳೆದಿದ್ದಾರೆ.
ಅಪಘಾತದ ಸುದ್ದಿ ತಿಳಿದು ತಕ್ಷಣವೇ ಘಟನಾ ಸ್ಥಳಕ್ಕೆ ಧಾವಿಸಿದ ಕಾರ್ಕಳ ಗ್ರಾಮಾಂತರ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಕಾಗದಪತ್ರಗಳನ್ನು ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಮುಂದಿನ ತನಿಖೆ ಮುಂದುವರಿಸಿದ್ದಾರೆ.


