
ಮಂಗಳೂರು : ನ್ಯಾಯಾಲಯಕ್ಕೆ ಹಾಜರಾಗದೆ ಸುಮಾರು 20 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಎರಡು ಎಲ್.ಪಿ.ಸಿ (LPC) ಪ್ರಕರಣಗಳ ವಾರಂಟ್ ಆರೋಪಿಯನ್ನು ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಅಪರಾಧ ತಂಡದ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಮಂಗಳೂರಿನ ಎನ್.ಎಂ.ಪಿ.ಟಿ ಕಾಲೋನಿಯ 2ನೇ ಅವಿನ್ಯೂ ಮೂಲದ, ಪ್ರಸ್ತುತ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕೌಡೂರು ಗ್ರಾಮದ ರಂಗನಪಲ್ಕೆ ನಿವಾಸಿ ಮನೋಜ್ (44) ಎಂದು ಗುರುತಿಸಲಾಗಿದೆ.
ಪ್ರಕರಣದ ಹಿನ್ನೆಲೆ: 2005ರಲ್ಲಿ ನಡೆದ ಕೋಮು ಗಲಭೆಯ ಸಂದರ್ಭದಲ್ಲಿ ಕೊಲೆಯಾದ ಪೊಳಲಿ ಅನಂತು ಎಂಬಾತನ ಶವ ಮೆರವಣಿಗೆಯ ವೇಳೆ ನಡೆದ ಗಲಾಟೆಗೆ ಸಂಬಂಧಿಸಿದಂತೆ ಮನೋಜ್ ವಿರುದ್ಧ ಬಜಪೆ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು (ಅ.ಕ್ರ: 101/2005 ಮತ್ತು 104/2005) ದಾಖಲಾಗಿದ್ದವು. ಈ ಪ್ರಕರಣಗಳ ವಿಚಾರಣೆ ಮಂಗಳೂರಿನ 3ನೇ ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ ನಡೆಯುತ್ತಿತ್ತು.
ಆದರೆ ಆರೋಪಿ ಮನೋಜ್ 2007ರಲ್ಲಿ ವಿದೇಶಕ್ಕೆ ತೆರಳಿದ್ದು, ಬಳಿಕ ಊರಿಗೆ ಮರಳಿದ ನಂತರವೂ ನ್ಯಾಯಾಲಯಕ್ಕೆ ಹಾಜರಾಗದೆ ಕಾರ್ಕಳದ ಕೌಡೂರಿನಲ್ಲಿ ವಾಸವಿದ್ದುಕೊಂಡು ತಲೆಮರೆಸಿಕೊಂಡಿದ್ದನು. ಈ ಹಿನ್ನೆಲೆಯಲ್ಲಿ ನ್ಯಾಯಾಲಯವು 2016ರಲ್ಲಿ ಈತನ ವಿರುದ್ಧ ಎರಡು ಪ್ರಕರಣಗಳಲ್ಲಿ ಎಲ್.ಪಿ.ಸಿ ವಾರಂಟ್ ಹೊರಡಿಸಿತ್ತು.
ಪೊಲೀಸರ ಕಾರ್ಯಾಚರಣೆ: ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಅವರ ಅಪರಾಧ ಪತ್ತೆ ತಂಡ, ನವೆಂಬರ್ 14ರಂದು ಆರೋಪಿ ಮನೋಜ್‌ನನ್ನು ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮಕ್ಕಾಗಿ ಬಜಪೆ ಪೊಲೀಸ್ ಠಾಣೆಗೆ ಹಸ್ತಾಂತರಿಸಿದೆ.


