ಬೆಳ್ತಂಗಡಿ : ಸವಾಲುಗಳನ್ನು ಧೈರ್ಯದಿಂದ ಎದುರಿಸಿ ಮುನ್ನಡೆದಾಗ ಮಾತ್ರ ಭವಿಷ್ಯ ಉಜ್ವಲವಾಗಲು ಸಾಧ್ಯ. ಸ್ಪರ್ಧಾತ್ಮಕ ಯುಗದಲ್ಲಿ ಬದಲಾವಣೆ ಅನಿವಾರ್ಯವಾಗಿದ್ದು, ಉತ್ಪನ್ನಗಳ ಗುಣಮಟ್ಟ, ಮಾರುಕಟ್ಟೆ ವ್ಯವಸ್ಥೆ ಹಾಗೂ ಗ್ರಾಹಕರಿಗೆ ನೀಡುವ ಸೇವೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ಮೋಹನ್ ಕುಮಾರ್ ಅವರು ಪರಿಚಯಿಸಿರುವ ನೂತನ ಉತ್ಪನ್ನಗಳು ಆಧುನಿಕ ಕಟ್ಟಡ ನಿರ್ಮಾಣ ಕ್ಷೇತ್ರಕ್ಕೆ ಉತ್ತಮ ಕೊಡುಗೆಯಾಗಲಿವೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ಹೇಳಿದರು.ಅವರು ನ.8 ರಂದು ಭಾನುವಾರ ಉಜಿರೆಯ ಲಕ್ಷ್ಮೀ ಇಂಡಸ್ಟ್ರೀಸ್- ಕನಸಿನ ಮನೆ ಸಂಸ್ಥೆಯ ನೂತನ ಉತ್ಪನ್ನಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಉದ್ಯಮದ ಬೆಳವಣಿಗೆಗೆ ಲಭ್ಯವಿರುವ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳುವುದರ ಜತೆಗೆ ಉತ್ತಮ ಸಿಬ್ಬಂದಿಗಳ ಪಾತ್ರವೂ ಮಹತ್ವದ್ದಾಗಿದೆ. ಉದ್ಯಮ ನಡೆಸುವಾಗ ಕೇವಲ ಲಾಭದ ದೃಷ್ಟಿಯಷ್ಟೇ ಅಲ್ಲದೆ, ಗ್ರಾಹಕರ ಹಿತ ಮತ್ತು ಅಗತ್ಯಗಳ ಬಗ್ಗೆಯೂ ಕಾಳಜಿ ಹೊಂದಿರಬೇಕು. ಗುಣಮಟ್ಟದ ಉತ್ಪನ್ನ ಹಾಗೂ ಉತ್ತಮ ಸೇವೆಯ ಮೂಲಕ ಗ್ರಾಹಕರ ವಿಶ್ವಾಸ ಗಳಿಸಿದಾಗ ಉದ್ಯಮ ನಿರಂತರವಾಗಿ ಬೆಳೆಯಲು ಸಾಧ್ಯ ಎಂದರು.
ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ ಮಾತನಾಡಿ, ಉದ್ಯಮದ ಯಶಸ್ಸಿಗೆ ವೈಯಕ್ತಿಕ ಶಿಸ್ತು, ದಕ್ಷತೆ, ಉದ್ಯಮಶೀಲತೆ ಹಾಗೂ ಇತರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯುವ ಮನೋಭಾವ ಅಗತ್ಯ. ಮನುಷ್ಯ ಶ್ರೇಷ್ಠನಾಗುವುದು ತನ್ನ ಕುಟುಂಬಕ್ಕೆ ಮಾತ್ರವಲ್ಲದೆ ಇಡೀ ಸಮಾಜಕ್ಕೆ ಆಧಾರಸ್ತಂಭವಾಗಿ ನಿಲ್ಲುವ ಗುಣವನ್ನು ಬೆಳೆಸಿಕೊಂಡಾಗ ಮಾತ್ರ ಎಂದು ಹೇಳಿದರು.
ಮಾಜಿ ಎಂಎಲ್ ಸಿ ಪ್ರತಾಪಸಿಂಹ ನಾಯಕ್ ಮಾತನಾಡಿ, ಯುವಜನರು ಉತ್ತಮ ಜೀವನ ರೂಪಿಸಿಕೊಳ್ಳಲು ಹಿರಿಯರ ಮಾರ್ಗದರ್ಶನ ಅತ್ಯಗತ್ಯ. ನಾವು ಮಾಡುವ ಪ್ರತಿಯೊಂದು ಉತ್ತಮ ಕೆಲಸವೂ ದೇಶಕ್ಕೆ ನೀಡುವ ಕೊಡುಗೆಯಾಗುತ್ತದೆ. ಪ್ರಾಮಾಣಿಕ ಪರಿಶ್ರಮ ಮತ್ತು ನಿರಂತರ ಶ್ರಮಕ್ಕೆ ಉತ್ತಮ ಫಲಿತಾಂಶ ದೊರೆಯುವುದು ನಿಶ್ಚಿತ ಎಂದರು.
ಉದ್ಯಮಿ ಶಶಿಧರ್ ಶೆಟ್ಟಿ ಬರೋಡ ಹಾಗೂ ಎಸಿಸಿಇ (ಐ) ಬೆಳ್ತಂಗಡಿ ಸೆಂಟರ್ ಅಧ್ಯಕ್ಷ ಸುರೇಶ್ ಬಂಗೇರ ಶುಭ ಹಾರೈಸಿದರು.ಲೀಲಾವತಿ ರಾಜು ಮೇಸ್ತ್ರಿ, ರೇಷ್ಮಾ ಮೋಹನ್ ಕುಮಾರ್, ಮೌಲ್ಯ ಲಕ್ಷ್ಮೀ ಹಾಗೂ ಮಾನ್ವಿ ಲಕ್ಷ್ಮೀ ಉಪಸ್ಥಿತರಿದ್ದರು. ಶಿಕ್ಷಕ ಅಜಿತ್ ಕುಮಾರ್ ಕೊಕ್ರಾಡಿ ಕಾರ್ಯಕ್ರಮ ನಿರೂಪಿಸಿದರು.
ಕನಸಿನ ಹಿಂದೆ ಮಾರ್ಗದರ್ಶನದ ಶಕ್ತಿ: ಲಕ್ಷ್ಮೀ ಇಂಡಸ್ಟ್ರೀಸ್ನ ಮಾಲಕ ಕೆ. ಮೋಹನ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ನಾನು ಹಲವು ಕನಸುಗಳನ್ನು ಹೊಂದಿರುವ ವ್ಯಕ್ತಿ. ಅವುಗಳನ್ನು ನನಸಾಗಿಸುವ ಪ್ರಯತ್ನದ ಹಿಂದೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಕುಟುಂಬದ ಮಾರ್ಗದರ್ಶನ ಮತ್ತು ಪ್ರೋತ್ಸಾಹದ ಶಕ್ತಿಯಿದೆ. ಕಳೆದ 38 ವರ್ಷಗಳಿಂದ ಉದ್ಯಮ ನಡೆಸುತ್ತಿದ್ದು, ಇಂದು ರಾಜ್ಯದ ನಾನಾ ಭಾಗಗಳಲ್ಲದೆ ಕೇರಳ, ತಮಿಳುನಾಡು ಸೇರಿದಂತೆ ಇತರ ರಾಜ್ಯಗಳಿಗೂ ಉತ್ಪನ್ನಗಳನ್ನು ಪೂರೈಸಲಾಗುತ್ತಿದೆ. ಉದ್ಯಮವನ್ನು ಇನ್ನಷ್ಟು ವಿಸ್ತರಿಸುವ ಯೋಜನೆಯಿದೆ. ಮರಗಳ ಬಳಕೆಯನ್ನು ಕಡಿಮೆ ಮಾಡಿ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡುವ ಉದ್ದೇಶದಿಂದ, ಮರದ ಬಳಕೆಯಿಲ್ಲದೆ ಮನೆ ನಿರ್ಮಾಣಕ್ಕೆ ಅಗತ್ಯವಿರುವ ಸಾಮಗ್ರಿಗಳನ್ನು ತಯಾರಿಸುವ ಹೊಸ ಪ್ರಯತ್ನಕ್ಕೆ ಮುಂದಾಗಿದ್ದೇವೆ ಎಂದು ಹೇಳಿದರು.
ಲಕ್ಷ್ಮೀ ದ್ವಾರ: ಪರಿಸರ ಸ್ನೇಹಿ ಕಟ್ಟಡ ಉತ್ಪನ್ನಗಳ ಪರಿಚಯ: ಮರ, ಸಿಮೆಂಟ್ ಮತ್ತು ಫೈಬರ್ನಿಂದ ತಯಾರಿಸುವ ಸಾಂಪ್ರದಾಯಿಕ ಕಿಟಕಿ, ದಾರಂದ ಹಾಗೂ ಬಾಗಿಲುಗಳಿಗೆ ಪರ್ಯಾಯವಾಗಿ ಆಧುನಿಕ ತಂತ್ರಜ್ಞಾನ ಬಳಸಿ ಕಟ್ಟಡ ಸಾಮಗ್ರಿಗಳನ್ನು ಉತ್ಪಾದಿಸುವ ವಿನೂತನ ಪರಿಕಲ್ಪನೆಯೇ ಲಕ್ಷ್ಮೀ ದ್ವಾರ. ಪರಿಸರ ಸ್ನೇಹಿ ವಿಧಾನದಲ್ಲಿ ತಯಾರಿಸಲಾದ ಈ ಉತ್ಪನ್ನಗಳು ಒಂದು ಶತಮಾನದವರೆಗೆ ಬಾಳಿಕೆ ಬರುವ ಸಾಮರ್ಥ್ಯ ಹೊಂದಿವೆ ಎಂದು ಸಂಸ್ಥೆ ತಿಳಿಸಿದೆ. ಉತ್ತಮ ಗುಣಮಟ್ಟ, ಸುಲಭ ಜೋಡಣೆ ಹಾಗೂ ದೀರ್ಘಕಾಲದ ಬಾಳಿಕೆಯ ವಿಶೇಷತೆಗಳನ್ನು ಹೊಂದಿರುವ ಈ ಉತ್ಪನ್ನಗಳು ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಹೊಸ ಆಯ್ಕೆಯಾಗಲಿವೆ.


