ಸುಬ್ರಹ್ಮಣ್ಯ: ಗಾಡ್ರೇಜ್ನಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳು ರಹಸ್ಯವಾಗಿ ಮಾಯವಾದ ಘಟನೆ ಸುಬ್ರಹ್ಮಣ್ಯದ ಗುತ್ತಿಗಾರಿನಲ್ಲಿ ಬೆಳಕಿಗೆ ಬಂದಿದೆ!
ಗುತ್ತಿಗಾರಿನ ನಿವಾಸಿ ರಂಜಿತ್ ರಾಜ್ ಏಪ್ರಿಲ್ನಲ್ಲಿ ಮದುವೆಯಾಗಿ ಮೇ ತಿಂಗಳಲ್ಲಿ ಅಬುಧಾಬಿಗೆ ತೆರಳಿದ್ದರು. ತೆರಳುವ ಮುನ್ನ ಪತ್ನಿಯ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಮನೆಯ ಗಾಡ್ರೇಜ್ನಲ್ಲಿಟ್ಟು ಲಾಕ್ ಮಾಡಿ, ಕೀಲಿಕೈಯನ್ನು ತಾಯಿಗೆ ನೀಡಿದ್ದರು.
ನವೆಂಬರ್ 1ರಂದು ರಂಜಿತ್ ಅಬುಧಾಬಿಯಿಂದ ವಾಪಸ್ ಬಂದಾಗ ಗಾಡ್ರೇಜ್ ಬಾಗಿಲು ತೆರೆದಿತ್ತು. ಮಾರನೇ ದಿನ ಪತ್ನಿ ಲಾಕರ್ ಪರಿಶೀಲಿಸಿದಾಗ ಕಳ್ಳತನವಾಗಿರುವುದು ತಿಳಿದುಬಂದಿದೆ. ಬೆಳ್ಳಿ ಒಡವೆ ಹಾಗೂ ನಗದು ಹಣ ಹಾಗೆಯೇ ಇತ್ತು, ಆದರೆ 69 ಗ್ರಾಂ ತೂಕದ ಚಿನ್ನಾಭರಣಗಳು ಮಾತ್ರ ಗಾಯಬ್ ಆಗಿದ್ದವು!
ಸುಮಾರು 7.61 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಬಳೆಗಳು, ಲಕ್ಷ್ಮಿ ಪೆಂಡೆಂಟ್ ನೆಕ್ಲೇಸ್, ಜುಮುಕಿ ಹಾಗೂ ಚಿನ್ನದ ಚೈನ್ ಕಳವಾಗಿದ್ದು, ಕುಟುಂಬಸ್ಥರನ್ನು ವಿಚಾರಿಸಿದರೂ ಯಾವುದೇ ಸುಳಿವು ಸಿಕ್ಕಿಲ್ಲ.ಈ ಸಂಬಂಧ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಕಳ್ಳರ ಪತ್ತೆಗೆ ತನಿಖೆ ಚುರುಕುಗೊಳಿಸಿದ್ದಾರೆ.


