ಉಡುಪಿ: ಫೇರ್‌ವೆಲ್ ಸಂಭ್ರಮದ ಹೆಸರಿನಲ್ಲಿ ಮಣಿಪಾಲದ ವಿದ್ಯಾರ್ಥಿಗಳು ಸಾರ್ವಜನಿಕ ಸ್ಥಳಗಳಲ್ಲಿ ಹುಚ್ಚಾಟ ಮೆರೆದಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಒಂದು ದಿನದ ಹಿಂದಷ್ಟೇ ಮಣಿಪಾಲದಲ್ಲಿ ಸ್ಟ್ರೀಟ್ ಫೈಟ್ ವಿಡಿಯೋ ವೈರಲ್ ಆಗಿ ಸುದ್ದಿಯಾಗಿತ್ತು. ಇದೀಗ ವಿದ್ಯಾರ್ಥಿಗಳ ಫೇರ್‌ವೆಲ್ ಆಚರಣೆಯ ವಿಡಿಯೋ ಮತ್ತೊಮ್ಮೆ ಮಣಿಪಾಲವನ್ನು ಸುದ್ದಿಗೆ ತಂದಿದೆ.
ಕಾಲೇಜಿನ ಅಂತಿಮ ದಿನದ ಸಂಭ್ರಮಾಚರಣೆಯ ವೇಳೆ ವಿದ್ಯಾರ್ಥಿಗಳು ಕಾರಿನ ಮೇಲೆ ಸ್ಪಾರ್ಕ್ಲರ್ ಪಟಾಕಿ ಹಚ್ಚಿ ಬರ್ನ್‌ಔಟ್ ಮಾಡಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲದೆ, ರಾತ್ರಿ ವೇಳೆ ಕಾರಿನ ಸನ್‌ರೂಫ್ ತೆರೆದು ಸಿಟಿಯಲ್ಲಿ ರೌಂಡ್ ಹಾಕುತ್ತಾ, ಪಟಾಕಿ ಸಿಡಿಸಿ ಕರ್ಕಶ ಸಂಗೀತದೊಂದಿಗೆ ಮಣಿಪಾಲದ ರಸ್ತೆಗಳಲ್ಲಿ ಸುತ್ತಾಡಿದ್ದಾರೆ.
ಸಂಭ್ರಮಾಚರಣೆಯ ಹೆಸರಿನಲ್ಲಿ ವಿದ್ಯಾರ್ಥಿಗಳು ನಡೆಸಿದ ಈ ಹುಚ್ಚಾಟದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕ ಸುರಕ್ಷತೆ ಮತ್ತು ರಸ್ತೆ ನಿಯಮಗಳ ಪಾಲನೆ ಕುರಿತು ಚರ್ಚೆಗೆ ಗ್ರಾಸವಾಗಿದೆ.


