Sunday, November 1, 2026
Homeಅಪರಾಧಪಾದ್ರಿ ಸಿಪ್ರಿಯನ್ ಪಿಂಟೋ ವಿರುದ್ಧದ ಪೋಕ್ಸೋ ಪ್ರಕರಣ: ಸಂತ್ರಸ್ತರು, ಸಾಕ್ಷಿಗಳಿಗೆ ಬೆದರಿಕೆ ಆರೋಪ; ರಾಬರ್ಟ್ ರೊಜಾರಿಯೋ

ಪಾದ್ರಿ ಸಿಪ್ರಿಯನ್ ಪಿಂಟೋ ವಿರುದ್ಧದ ಪೋಕ್ಸೋ ಪ್ರಕರಣ: ಸಂತ್ರಸ್ತರು, ಸಾಕ್ಷಿಗಳಿಗೆ ಬೆದರಿಕೆ ಆರೋಪ; ರಾಬರ್ಟ್ ರೊಜಾರಿಯೋ

- Advertisement -
- Advertisement -

ಮಂಗಳೂರು: ಪಾದ್ರಿ ಸಿಪ್ರಿಯನ್ ಪಿಂಟೋ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣದಲ್ಲಿ ಸಂತ್ರಸ್ತರು ಹಾಗೂ ಸಾಕ್ಷಿಗಳಿಗೆ ಬೆದರಿಕೆ ಹಾಕಿ, ಸಾಕ್ಷ್ಯ ನಾಶಪಡಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ ರಾಬರ್ಟ್ ರೊಜಾರಿಯೋ ಆರೋಪಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಪ್ರಾಪ್ತ ಬಾಲಕರ ಮೇಲಿನ ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಪಾದ್ರಿ ಸಿಪ್ರಿಯನ್ ಪಿಂಟೋ ನ್ಯಾಯಾಂಗ ಬಂಧನದ ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿರುವುದು ಸಂತ್ರಸ್ತರಲ್ಲಿ ಆತಂಕ ಮೂಡಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಸಂತ್ರಸ್ತರು ದೂರು ನೀಡಲು ಮುಂದಾಗುತ್ತಿರುವ ಸಂದರ್ಭದಲ್ಲಿ ಆರೋಪಿಯ ಬಿಡುಗಡೆ ನಿರಾಶೆ ಉಂಟುಮಾಡಿದೆ. ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದ ಸಮಯದಲ್ಲೇ ಆತನ ಸಹಚರರು ಸಂತ್ರಸ್ತರು ಹಾಗೂ ಸಾಕ್ಷಿಗಳಿಗೆ ಬೆದರಿಕೆ ಹಾಕಿ, ಸಾಕ್ಷ್ಯಗಳನ್ನು ನಾಶಪಡಿಸಲು ಯತ್ನಿಸಿದ್ದಾರೆ ಎಂದು ಅವರು ಆರೋಪಿಸಿದರು. ಈ ಸಂಬಂಧ ಆಲ್ವಿನ್ ಡಿಸೋಜ ಪಾನೀರ್, ರೋನಾಲ್ಡ್ ರೊಡ್ರಿಗಸ್ ಸೇರಿದಂತೆ ಮೂವರ ವಿರುದ್ಧ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಷಡ್ಯಂತ್ರ ಹಾಗೂ ಸಾಕ್ಷ್ಯ ನೀಡದಂತೆ ತಡೆಯಲು ಯತ್ನಿಸಿದ ಆರೋಪದಡಿ ದೂರು ದಾಖಲಿಸಲಾಗಿದೆ ಎಂದು ತಿಳಿಸಿದರು.

ಪ್ರಕರಣದ ಸಂತ್ರಸ್ತ ಬಾಲಕನೊಬ್ಬ ಅಕ್ಟೋಬರ್ 28ರಂದು ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಸಿಆರ್‌ಪಿಸಿ ಸೆಕ್ಷನ್ 183ರ ಅಡಿಯಲ್ಲಿ ಹೇಳಿಕೆ ದಾಖಲಿಸಿದ್ದಾನೆ. ಈ ವೇಳೆ ಇತರ ಸಾಕ್ಷಿಗಳಿಗೆ ಬೆದರಿಕೆ ಹಾಕಿರುವ ವಿಚಾರವನ್ನೂ ಉಲ್ಲೇಖಿಸಿದ್ದಾನೆ. ಆದರೆ, ಜಾಮೀನು ವಿಚಾರಣೆ ಸಂದರ್ಭದಲ್ಲಿ ಈ ಹೇಳಿಕೆಯನ್ನು ಪರಿಗಣಿಸಲಾಗಿದೆಯೇ ಎಂಬ ಪ್ರಶ್ನೆಯೂ ಇದೆ ಎಂದು ರಾಬರ್ಟ್ ರೊಜಾರಿಯೋ ತಿಳಿಸಿದರು.

ಕಾನೂನು ವ್ಯವಸ್ಥೆ ಎಷ್ಟೇ ಬಲಿಷ್ಠವಾಗಿದ್ದರೂ ಅದರ ಅನುಷ್ಠಾನದಲ್ಲಿ ಲೋಪಗಳಿದ್ದರೆ ಸಂತ್ರಸ್ತರಿಗೆ ನ್ಯಾಯ ದೊರೆಯುವುದು ಕಷ್ಟ. ಧಾರ್ಮಿಕ ಸಂಸ್ಥೆಗಳ ಪ್ರಭಾವಕ್ಕೆ ಮಣಿಯದೆ, ಪ್ರಕರಣದ ಸಂತ್ರಸ್ತರು ಹಾಗೂ ಸಾಕ್ಷಿಗಳಿಗೆ ಸೂಕ್ತ ರಕ್ಷಣೆ ಒದಗಿಸಬೇಕು. ರಾಜ್ಯ ಸರ್ಕಾರ ಯಾವುದೇ ಒತ್ತಡಕ್ಕೆ ಒಳಗಾಗದೆ ಕಾನೂನುಬದ್ಧವಾಗಿ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

- Advertisement -

Latest News

error: Content is protected !!