
ಉತ್ತರಾಖಂಡದ ಜೋಶಿಮಠ ಸಮೀಪ ಶುಕ್ರವಾರ ಸಂಭವಿಸಿದ ಭೀಕರ ಹೆಲಿಕಾಪ್ಟರ್ ಅಪಘಾತದಲ್ಲಿ ಪೈಲಟ್ ಸೇರಿದಂತೆ ಆರು ಮಂದಿ ಮೃತಪಟ್ಟಿದ್ದಾರೆ. ಬದರಿನಾಥ್ನಿಂದ ಡೆಹ್ರಾಡೂನ್ಗೆ ತೆರಳುತ್ತಿದ್ದ ‘ಟ್ರಾನ್ಸ್ ಭಾರತ್ ಏವಿಯೇಷನ್’ ಸಂಸ್ಥೆಯ ಹೆಲಿಕಾಪ್ಟರ್ ಪತನಗೊಂಡಿದ್ದು, ಮೃತರ ಪೈಕಿ ಐವರು ಬೆಂಗಳೂರಿನವರಾಗಿದ್ದಾರೆ.
ಮೃತರನ್ನು ದೆಹಲಿ ಮೂಲದ ಪೈಲಟ್ ಹಿಮಾಂಶು ಸಬರ್ವಾಲ್ (48), ಬೆಂಗಳೂರಿನ ಸಿಸಿಬಿ ಇನ್ಸ್ಪೆಕ್ಟರ್ ಅರುಣ್ ಸಾಲಂಕೆ (44), ವಕೀಲ ಶಂಕರ್ ಗೌಡ (39), ಪ್ರತಾಪ್ ಬಿ. ನಿಂಗರಾಜು (41), ಸುಧೀರ್ ಕೆ. (49) ಹಾಗೂ ಎಚ್.ಎಸ್. ನಟರಾಜ್ (51) ಎಂದು ಗುರುತಿಸಲಾಗಿದೆ.
ಶುಕ್ರವಾರ ಮಧ್ಯಾಹ್ನ 1.14ಕ್ಕೆ ಹಾರಾಟ ಆರಂಭಿಸಿದ್ದ ಹೆಲಿಕಾಪ್ಟರ್ ಜೋಶಿಮಠದ ಹಾಥಿ ಪಹಾಡ್ ಸಮೀಪ ಸಂಪರ್ಕ ಕಳೆದುಕೊಂಡಿತ್ತು. ಬಳಿಕ ಶೋಧ ಕಾರ್ಯಾಚರಣೆ ನಡೆಸಿದಾಗ ಚಾಯೆನ್ ಗ್ರಾಮದ ಬಳಿ ಪತನಗೊಂಡಿರುವುದು ಪತ್ತೆಯಾಗಿದೆ. ದಟ್ಟ ಮೋಡ ಹಾಗೂ ಮಳೆಯಿಂದಾಗಿ ರಕ್ಷಣಾ ಕಾರ್ಯಾಚರಣೆಗೆ ಅಡಚಣೆ ಉಂಟಾಗಿದೆ ಎಂದು ಚಮೋಲಿ ಜಿಲ್ಲಾಧಿಕಾರಿ ಗೌರವ್ ಕುಮಾರ್ ತಿಳಿಸಿದ್ದಾರೆ. ದುರಂತದ ಬಗ್ಗೆ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಸಂತಾಪ ಸೂಚಿಸಿದ್ದಾರೆ.


