Friday, October 30, 2026
Homeಅಪರಾಧಅಪ್ರಾಪ್ತನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣ; ಚರ್ಚ್ ಫಾದರ್ ಸಿಪ್ರಿಯನ್ ಪಿಂಟೊಗೆ ಷರತ್ತುಬದ್ಧ ಜಾಮೀನು...

ಅಪ್ರಾಪ್ತನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣ; ಚರ್ಚ್ ಫಾದರ್ ಸಿಪ್ರಿಯನ್ ಪಿಂಟೊಗೆ ಷರತ್ತುಬದ್ಧ ಜಾಮೀನು ಮಂಜೂರು

- Advertisement -
- Advertisement -

ಮಂಗಳೂರು: ನಗರದ ವೆಲೆನ್ಸಿಯಾದ ಸೇಂಟ್ ವಿನ್ಸೆಂಟ್ ಫೆರರ್ ಚರ್ಚ್‌ಗೆ ಬರುತ್ತಿದ್ದ ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿರುವ ಚರ್ಚ್‌ನ ಮಾಜಿ ಧರ್ಮಗುರು ರೆ. ಫಾ. ಸಿಪ್ರಿಯನ್ ಪಿಂಟೊ (65) ಅವರಿಗೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಅಕ್ಟೋಬರ್ 15ರಂದು ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಅಕ್ಟೋಬರ್ 18ರಂದು ಪೊಲೀಸರ ಮುಂದೆ ಶರಣಾಗಿದ್ದ ಸಿಪ್ರಿಯನ್ ಪಿಂಟೊ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಇದೀಗ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಮಾನು ಕೆ.ಎಸ್. ಅವರು ಜಾಮೀನು ಮಂಜೂರು ಮಾಡಿ ಆದೇಶಿಸಿದ್ದಾರೆ.

ಆರೋಪಿಯ ಪರ ವಕೀಲ ರಾಜೇಶ್ ಕುಮಾರ್ ಅಮ್ಟಾಡಿ ಅವರು, ಚರ್ಚ್ ಆವರಣದಲ್ಲಿ ಶಿಸ್ತು ಕಾಪಾಡುವ ಉದ್ದೇಶದಿಂದ ಸಂಜೆ 7 ಗಂಟೆಯ ಬಳಿಕ ಗೇಟ್ ಮುಚ್ಚುವುದು ಸೇರಿದಂತೆ ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರಲಾಗಿತ್ತು. ಇದರಿಂದ ಅಸಮಾಧಾನಗೊಂಡ ಕೆಲವರು ಸುಳ್ಳು ದೂರು ನೀಡಿದ್ದಾರೆ ಎಂದು ವಾದಿಸಿದ್ದರು.

ಅಲ್ಲದೆ, ಘಟನೆ ನಡೆದಿದೆ ಎನ್ನಲಾದ ಸಮಯಕ್ಕೂ ದೂರು ದಾಖಲಾದ ದಿನಾಂಕಕ್ಕೂ ಎರಡು ತಿಂಗಳಿಗಿಂತ ಹೆಚ್ಚು ಅಂತರವಿದೆ. ಇದೇ ವಿಚಾರವಾಗಿ ಈ ಹಿಂದೆ ಮಕ್ಕಳ ರಕ್ಷಣಾ ನಿರ್ದೇಶನಾಲಯದ ಸೂಚನೆಯಂತೆ ಪೊಲೀಸರು ನಡೆಸಿದ ವಿಚಾರಣೆಯಲ್ಲೂ ಆರೋಪಕ್ಕೆ ಪೂರಕವಾದ ಸಾಕ್ಷ್ಯಗಳು ಲಭ್ಯವಾಗಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು. ಆರೋಪಿಗೆ 65 ವರ್ಷ ವಯಸ್ಸಾಗಿದ್ದು, ವಿವಿಧ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎಂಬ ಅಂಶವನ್ನೂ ಪರಿಗಣಿಸುವಂತೆ ಮನವಿ ಮಾಡಿದ್ದರು. ವಾದ ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯವು 1 ಲಕ್ಷ ರೂ. ವೈಯಕ್ತಿಕ ಬಾಂಡ್ ಹಾಗೂ ಅಷ್ಟೇ ಮೊತ್ತದ ಒಬ್ಬರ ಭದ್ರತಾ ಖಾತರಿಯೊಂದಿಗೆ ಜಾಮೀನು ನೀಡಿದೆ.

ಜಾಮೀನಿನ ಷರತ್ತುಗಳು:

ವಿಚಾರಣೆಯ ಪ್ರತಿಯೊಂದು ದಿನಾಂಕದಂದು ನ್ಯಾಯಾಲಯಕ್ಕೆ ಹಾಜರಾಗಬೇಕು.
ತನಿಖಾಧಿಕಾರಿಗಳು ಕರೆದಾಗ ಹಾಜರಾಗಿ ತನಿಖೆಗೆ ಸಹಕರಿಸಬೇಕು.
ಸಂತ್ರಸ್ತ ಅಪ್ರಾಪ್ತನನ್ನು ಭೇಟಿಯಾಗಬಾರದು ಅಥವಾ ಕಿರುಕುಳ ನೀಡಬಾರದು.
ಸಾಕ್ಷ್ಯಾಧಾರಗಳನ್ನು ನಾಶಪಡಿಸಬಾರದು.
ನ್ಯಾಯಾಲಯದ ಅನುಮತಿಯಿಲ್ಲದೆ ದೇಶ ಬಿಟ್ಟು ತೆರಳಬಾರದು.
ವಾಸಸ್ಥಳದ ವಿಳಾಸ ಹಾಗೂ ಮೊಬೈಲ್ ಸಂಖ್ಯೆಯನ್ನು ಒದಗಿಸಬೇಕು.

ನ್ಯಾಯಾಲಯ ವಿಧಿಸಿರುವ ಯಾವುದೇ ಷರತ್ತುಗಳನ್ನು ಉಲ್ಲಂಘಿಸಿದರೆ ಜಾಮೀನು ರದ್ದುಗೊಳಿಸುವಂತೆ ಪ್ರಾಸಿಕ್ಯೂಷನ್ ಅರ್ಜಿ ಸಲ್ಲಿಸಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

- Advertisement -

Latest News

error: Content is protected !!