
ಸುರತ್ಕಲ್: ಯುವಕ ಮತ್ತು ಯುವತಿಯ ಕಿರುಕುಳ ಹಾಗೂ ಬೆದರಿಕೆಯಿಂದಾಗಿ ತನ್ನ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಮೃತ ಸೋಮನಾಥ್ ಅವರ ಪತ್ನಿ ಸರಿತಾ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಅಕ್ಟೋಬರ್ 27ರಂದು ಹೊಸಬೆಟ್ಟು ನಿವಾಸಿ ಸೋಮನಾಥ್ ಅವರು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಪತ್ನಿ ಸರಿತಾ ಅವರು ದೂರಿನಲ್ಲಿ ಹಲವು ವಿಷಯಗಳನ್ನು ಉಲ್ಲೇಖಿಸಿದ್ದಾರೆ.
ಅಕ್ಟೋಬರ್ 25ರ ರಾತ್ರಿ ಸುಮಾರು 12:15ಕ್ಕೆ ಬೀಚ್ ಬಳಿ ಕಾರು ಪಾರ್ಕಿಂಗ್ ವಿಚಾರವಾಗಿ ಯುವಕ ಮತ್ತು ಯುವತಿ ಜಗಳ ಆರಂಭಿಸಿ, ಪತಿಯನ್ನು ನಿಂದಿಸಿದ್ದರು. ಈ ವೇಳೆ ಪತಿಯೂ ಪ್ರತಿಯಾಗಿ ಬೈದಿದ್ದರು. ಆದರೆ, ಪತಿಯಿಂದ ಯಾವುದೇ ಕಿರುಕುಳವಾಗದಿದ್ದರೂ, ಹಿರಿಯ ಅಧಿಕಾರಿಗಳ ಪರಿಚಯವಿದೆ, ನಿಮ್ಮ ವಿರುದ್ಧ ಏನು ಮಾಡುತ್ತೇವೆ ನೋಡಿ ಎಂದು ಬೆದರಿಕೆ ಹಾಕಿ, ಯುವತಿ ಸುಳ್ಳು ಆರೋಪದಡಿ ಪ್ರಕರಣ ದಾಖಲಿಸಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಅಲ್ಲದೆ, ಕಮಿಷನರ್ ಹೆಸರನ್ನು ಬಳಸಿಕೊಂಡು ಕಾಲು ಹಿಡಿದು ಕ್ಷಮೆ ಕೇಳುವಂತೆ ಮಾಡಿ ಪತಿಗೆ ಅವಮಾನಿಸಲಾಗಿತ್ತು. ಪದೇಪದೆ ಪೊಲೀಸ್ ಠಾಣೆಯಿಂದ ಕರೆಗಳು ಬರುತ್ತಿದ್ದವು. ಪೊಲೀಸ್ ಠಾಣೆ ಹಾಗೂ ನ್ಯಾಯಾಲಯದ ವಿಚಾರಗಳಿಗೆ ಹೆದರಿ ಪತಿ ಮಾನಸಿಕವಾಗಿ ನೊಂದಿದ್ದರು. ಇದೇ ಕಾರಣದಿಂದ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸರಿತಾ ಆರೋಪಿಸಿದ್ದಾರೆ.
ಈ ಸಂದರ್ಭದಲ್ಲಿ ಹೊಸಬೆಟ್ಟು ಮೊಗವೀರ ಸಂಘದ ಪ್ರಮುಖರು, ಗಂಗಾಧರ ಎಚ್., ಗುರಿಕಾರರು, ಮಾಜಿ ಕಾರ್ಪೊರೇಟರ್ ನಯನ ಆರ್. ಕೋಟ್ಯಾನ್ ಸೇರಿದಂತೆ ವಿವಿಧ ಸಂಘಟನೆಗಳ ಪ್ರಮುಖರು ಉಪಸ್ಥಿತರಿದ್ದರು.


