
ಮಂಗಳೂರು: ಧರ್ಮ ಶಿಕ್ಷಣ ನೀಡಬೇಕಿದ್ದ 40 ವರ್ಷದ ವಿವಾಹಿತ ಧರ್ಮಗುರುವೊಬ್ಬ, ತನಗಿಂತ ಅರ್ಧ ವಯಸ್ಸಿನ ಯುವತಿಯನ್ನು ಪ್ರೀತಿಯ ಬಲೆಯಲ್ಲಿ ಬೀಳಿಸಿಕೊಂಡು ಓಡಿಬಂದು ಮದುವೆಯಾಗಿರುವ ಘಟನೆ ಉತ್ತರ ಕನ್ನಡದ ಕುಮಟಾ ಹಾಗೂ ಮಂಗಳೂರಿನಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಮಂಗಳೂರಿನ ಅಸೈಗೋಳಿ ನಿವಾಸಿ ಅಶ್ರಫ್ ಸಅದಿ (40) ಕುಮಟಾದ ಮದರಸಾವೊಂದರಲ್ಲಿ ಧರ್ಮಗುರುವಾಗಿದ್ದನು. ಈ ವೇಳೆ ಧರ್ಮ ಶಿಕ್ಷಣಕ್ಕೆ ಬರುತ್ತಿದ್ದ ಕುಮಟಾದ ಬೆಟಗುಳಿ ನಿವಾಸಿ ದಾವುದ್ ಖಾಸಿಂ ಅವರ 22 ವರ್ಷದ ಪುತ್ರಿಯೊಂದಿಗೆ ಸ್ನೇಹ ಬೆಳೆಸಿ, ತನಗೆ ಈಗಾಗಲೇ ಮದುವೆಯಾಗಿ ಮಕ್ಕಳಿರುವ ವಿಷಯ ಮುಚ್ಚಿಟ್ಟು ಪ್ರೀತಿಸುವಂತೆ ಮಾಡಿದ್ದನು. ಇತ್ತೀಚೆಗೆ ಇಬ್ಬರೂ ರಹಸ್ಯವಾಗಿ ನಿಖಾ ಮಾಡಿಕೊಂಡು ಮಂಗಳೂರಿಗೆ ಬಂದಿದ್ದರು.
ಮಗಳು ಕಾಣೆಯಾದ ಬಗ್ಗೆ ಪೋಷಕರು ಕೊಣಾಜೆ ಪೊಲೀಸ್ ಠಾಣೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಇಬ್ಬರನ್ನೂ ಠಾಣೆಗೆ ಕರೆಸಿ ವಿಚಾರಣೆ ನಡೆಸಿದರು. ಠಾಣೆಯ ಅಂಗಳದಲ್ಲಿ ಪೋಷಕರು ಮತ್ತು ಸಂಬಂಧಿಕರು ಕಣ್ಣೀರಿಟ್ಟು ಮನೆಗೆ ಬರುವಂತೆ ಎಷ್ಟೇ ಬೇಡಿಕೊಂಡರೂ ಯುವತಿ ಮಣಿಯಲಿಲ್ಲ. ತಾನು ಸ್ವ-ಇಚ್ಛೆಯಿಂದ ಬಂದಿದ್ದು, ಅಶ್ರಫ್ ಜೊತೆಯೇ ಬಾಳುವುದಾಗಿ ಪೊಲೀಸರಿಗೆ ಹೇಳಿಕೆ ನೀಡಿ ಆತನೊಂದಿಗೆ ತೆರಳಿದ್ದಾಳೆ. ಧರ್ಮದ ಹೆಸರಿನಲ್ಲಿ ಮಗಳ ಜೀವನ ಹಾಳುಮಾಡಿದ ಧರ್ಮಗುರುವನ್ನು ಮುಸ್ಲಿಂ ಸಮಾಜ ಬಹಿಷ್ಕರಿಸಬೇಕೆಂದು ಯುವತಿಯ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


