ಬಂಟ್ವಾಳ; ಫರಂಗಿಪೇಟೆಯಲ್ಲಿ ಸ್ಟುಡಿಯೋ ಮಾಲೀಕನ ಮೇಲೆ ಕತ್ತಿಯಿಂದ ದಾಳಿ ನಡೆಸಿ ಕೊಲೆಗೆ ಯತ್ನಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ನಾಲ್ವರು ಆರೋಪಿಗಳಿಗೆ 7 ವರ್ಷಗಳ ಜೈಲು ಶಿಕ್ಷೆ ಹಾಗೂ ಒಟ್ಟು ₹88,000 ದಂಡ ವಿಧಿಸಿ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಮಹತ್ವದ ತೀರ್ಪು ನೀಡಿದೆ. ಮಹಮ್ಮದ್ ಸೈಫುದಿನ್, ಮಹಮ್ಮದ್ ಅರ್ಷಾದ್, ಅಬ್ದುಲ್ ರಹಿಮಾನ್ (ಮುನ್ನಿ) ಹಾಗೂ ಮಹಮ್ಮದ್ ಸವಾದ್ ಶಿಕ್ಷೆಗೆ ಗುರಿಯಾದ ಅಪರಾಧಿಗಳು.
ಪ್ರಕರಣದ ಹಿನ್ನೆಲೆ: 2020ರ ಅಕ್ಟೋಬರ್ 28ರಂದು ಸಂಜೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಫರಂಗಿಪೇಟೆಯಲ್ಲಿರುವ ಸ್ಟುಡಿಯೋ ಮಾಲೀಕ ದಿನೇಶ್ ಎಂಬುವವರು ತಮ್ಮ ಅಂಗಡಿಯಲ್ಲಿದ್ದಾಗ, ಹಳೆಯ ದ್ವೇಷವನ್ನು ಇಟ್ಟುಕೊಂಡಿದ್ದ ಈ ನಾಲ್ವರು ಆರೋಪಿಗಳು ಏಕಾಏಕಿ ಕತ್ತಿಯಿಂದ ಭೀಕರವಾಗಿ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದರು.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಬಂಟ್ವಾಳ ಗ್ರಾಮಾಂತರ ಠಾಣೆಯ ಸಬ್ ಇನ್ಸ್‌ಪೆಕ್ಟರ್ (SI) ಪ್ರಸನ್ನ ಎಂ.ಎಸ್. ಅವರು ತನಿಖೆ ನಡೆಸಿ, ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ (ಚಾರ್ಜ್‌ಶೀಟ್) ಸಲ್ಲಿಸಿದ್ದರು.
ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಜಗದೀಶ್ ವಿ.ಎನ್. ಅವರು ಆರೋಪಿಗಳ ಮೇಲಿನ ಸಾಕ್ಷ್ಯಾಧಾರಗಳು ಸಾಬೀತಾದ ಹಿನ್ನೆಲೆಯಲ್ಲಿ ಅಕ್ಟೋಬರ್ 28ರಂದು ಈ ತೀರ್ಪು ಪ್ರಕಟಿಸಿದ್ದಾರೆ. ಸರ್ಕಾರಿ ಅಭಿಯೋಜಕರಾಗಿ ಜ್ಯೋತಿ ನಾಯಕ್ ಅವರು ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.


