ಕೇರಳ: ತಾಯ್ತನದ ವಾತ್ಸಲ್ಯ, ಕರುಳಬಳ್ಳಿಯ ಬಾಂಧವ್ಯ ಎಂಬುದು ಬರೀ ಮನುಷ್ಯರಿಗಷ್ಟೇ ಅಲ್ಲ, ಮೂಕಪ್ರಾಣಿಗಳಿಗೂ ಐಕ್ಯವಾದ ಪರಮ ಸತ್ಯ ಎಂಬುದಕ್ಕೆ ವಯನಾಡಿನ ಈ ಕರುಣಾಜನಕ ಘಟನೆಯೇ ಸಾಕ್ಷಿ. ಕಡಿದಾದ ಇಳಿಜಾರಿಗೆ ಬಿದ್ದ ತನ್ನ ಕಂದನನ್ನು ಉಳಿಸಿಕೊಳ್ಳಲು ತಾಯಿಯೊಂದು ನಡೆಸಿದ ಭೀಕರ ಹೋರಾಟ ಕೊನೆಗೂ ವಿಫಲವಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಪುಟ್ಟ ಮರಿಯಾನೆಯೊಂದು ಕೊನೆಯುಸಿರೆಳೆದಿದೆ.
ಕೇರಳದ ವಯನಾಡಿನ ಕಟ್ಟಿಕುಲಂ ಸಮೀಪದ ಮುತ್ತುಮರಿಯಲ್ಲಿ ಭಾನುವಾರ ಸಂಜೆ ಈ ದುರಂತ ಸಂಭವಿಸಿದೆ. ಅಪಾಯಕಾರಿ ಇಳಿಜಾರಿನ ಹಳ್ಳದಲ್ಲಿ ಬಿದ್ದು ನರಳುತ್ತಿದ್ದ ಮರಿಯಾನೆಯನ್ನು ಕಂಡ ಸ್ಥಳೀಯರು ತಕ್ಷಣವೇ ಆತಂಕಗೊಂಡು ಅರಣ್ಯ ಇಲಾಖೆಗೆ ಮಾಹಿತಿ ತಲುಪಿಸಿದ್ದರು.
ಸಿಸಿಟಿವಿಯಲ್ಲಿ ಸೆರೆಯಾಯ್ತು ಕರುಳ ಮಿಡಿತ: ಸ್ಥಳದ ಬಳಿಯಿದ್ದ ತೋಟವೊಂದರ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಅರಣ್ಯಾಧಿಕಾರಿಗಳು ಹಾಗೂ ಸ್ಥಳೀಯರು ಕಣ್ಣೀರು ಹಾಕುವಂತಾಗಿದೆ. ಮರಿಯು ಆಳವಾದ ಇಳಿಜಾರಿಗೆ ಜಾರಿ ಬೀಳುತ್ತಿದ್ದಂತೆ ತಾಯಿ ಆನೆ ಹಾಗೂ ಮತ್ತೊಂದು ಕಾಡಾನೆ ಅದನ್ನು ಮೇಲಕ್ಕೆತ್ತಲು ಗಂಟೆಗಳ ಕಾಲ ಸತತ ಪ್ರಯತ್ನ ನಡೆಸಿದ್ದವು. ತನ್ನ ಇಡೀ ಶಕ್ತಿಯನ್ನು ಧಾರೆ ಎರೆದು, ಕಂದನನ್ನು ಕಾಪಾಡಲು ಆ ತಾಯಿ ಆನೆ ಪಟ್ಟ ಶ್ರಮ ಎಂತಹ ಕಲ್ಲುಮನಸ್ಸನ್ನೂ ಕರಗಿಸುವಂತಿತ್ತು.ಆದರೆ, ದುರದೃಷ್ಟವಶಾತ್ ತಾಯಿಯ ಆ ಸುದೀರ್ಘ ಕರುಳಬಳ್ಳಿಯ ಹೋರಾಟದ ನಡುವೆಯೂ, ಮರಿಯು ತೀವ್ರವಾಗಿ ಜಾರಿ ಬಿದ್ದು ಗಂಭೀರವಾಗಿ ಗಾಯಗೊಂಡಿತ್ತು.
ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ವೈದ್ಯರ ತಂಡ, ಮರಿಯಾನೆಗೆ ತುರ್ತು ಚಿಕಿತ್ಸೆ ನೀಡಲು ಸಕಲ ಪ್ರಯತ್ನ ನಡೆಸಿತಾದರೂ ಗಂಭೀರವಾಗಿ ಗಾಯಗೊಂಡಿದ್ದ ಮರಿಯು ಚಿಕಿತ್ಸೆಗೆ ಸ್ಪಂದಿಸದೆ ಪ್ರಾಣ ಬಿಟ್ಟಿದೆ. ಸಿಸಿಟಿವಿ ಆಧಾರದ ಮೇಲೆ ಕಾಡಾನೆಗಳ ಚಲನವಲನದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಿರುವ ಅರಣ್ಯಾಧಿಕಾರಿಗಳು, ಮರಿಯಾನೆಯ ಮರಣೋತ್ತರ ಪರೀಕ್ಷೆ ನಡೆಸಿ ಮುಂದಿನ ಕ್ರಮಗಳನ್ನು ಕೈಗೊಂಡಿದ್ದಾರೆ.ತನ್ನ ಮರಿಯನ್ನು ಉಳಿಸಿಕೊಳ್ಳಲಾಗದೆ ಮೂಕವೇದನೆಯಲ್ಲಿ ಕಾಡಿನತ್ತ ಹೆಜ್ಜೆ ಹಾಕಿದ ಆ ತಾಯಿ ಆನೆಯ ರೋಧನ ಮಾತ್ರ ಇಡೀ ಪ್ರದೇಶದ ಜನರ ಕಣ್ಣಂಚಲ್ಲಿ ನೀರು ತರಿಸಿದೆ.


