Thursday, October 22, 2026
Homeಪ್ರಮುಖ-ಸುದ್ದಿಮೈಸೂರು ದಸರಾದಲ್ಲಿ ಪತ್ರಕರ್ತರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ; ಪೊಲೀಸರ ವಿರುದ್ಧ ಕ್ರಮಕ್ಕೆ ಒತ್ತಾಯ

ಮೈಸೂರು ದಸರಾದಲ್ಲಿ ಪತ್ರಕರ್ತರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ; ಪೊಲೀಸರ ವಿರುದ್ಧ ಕ್ರಮಕ್ಕೆ ಒತ್ತಾಯ

- Advertisement -
- Advertisement -

ಮೈಸೂರು: ದಸರಾ ಜಂಬೂ ಸವಾರಿ ಮೆರವಣಿಗೆಯ ವರದಿ ಮಾಡಲು ತೆರಳಿದ್ದ ಪತ್ರಕರ್ತರಿಗೆ ಕರ್ತವ್ಯ ನಿರ್ವಹಿಸಲು ಅಡ್ಡಿಪಡಿಸಿ, ದುರ್ವರ್ತನೆ ತೋರಿದ ಪೊಲೀಸರ ಕ್ರಮವನ್ನು ಖಂಡಿಸಿ ಪತ್ರಕರ್ತರು ಪ್ರತಿಭಟನೆ ನಡೆಸಿದರು.

ಈ ಘಟನೆಗೆ ಸಂಬಂಧಿಸಿದಂತೆ ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿಧಾನ ಪರಿಷತ್ ಸದಸ್ಯ ಕೆ. ಶಿವಕುಮಾರ್ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಅಧಿಕೃತ ವಾಹನದಲ್ಲಿ, ಪೊಲೀಸರಿಂದ ಅನುಮೋದಿತ ಪಾಸ್‌ಗಳನ್ನು ಹೊಂದಿದ್ದ ಪತ್ರಕರ್ತರು ಅರಮನೆಯ ಬ್ರಹ್ಮಪುರಿ ಗೇಟ್ ಮೂಲಕ ಪ್ರವೇಶಿಸಲು ಮುಂದಾದರು. ಆದರೆ, ಕರ್ತವ್ಯದಲ್ಲಿದ್ದ ಪೊಲೀಸರು ವಾಹನವನ್ನು ಒಳಗೆ ಬಿಡಲು ನಿರಾಕರಿಸಿ, ನಕಲಿ ಪಾಸ್ ಹೊಂದಿದ್ದಾರೆಂದು ಆರೋಪಿಸಿ, ಹಿರಿಯ ಪತ್ರಕರ್ತರು ಸೇರಿದಂತೆ ಹಲವರನ್ನು ಎಳೆದಾಡಿ ಹಲ್ಲೆಗೆ ಯತ್ನಿಸಲಾಗಿದೆ ಎಂದು ದೂರಲಾಗಿದೆ.

ಪತ್ರಕರ್ತರು ಪ್ರತಿಭಟನೆ ನಡೆಸಿದ ಬಳಿಕ ಒಳಗೆ ಪ್ರವೇಶಿಸಲು ಅವಕಾಶ ನೀಡಲಾಯಿತು. ಆದರೆ, ಮಾಧ್ಯಮ ಗ್ಯಾಲರಿಗೆ ತೆರಳುವಾಗ ಮತ್ತೊಂದು ಸ್ಥಳದಲ್ಲಿಯೂ ಪೊಲೀಸರು ತಡೆದು ಪ್ರವೇಶ ನಿರಾಕರಿಸಿದರು. ಸ್ಥಳಕ್ಕೆ ಆಗಮಿಸಿದ ಮೈಸೂರು ನಗರ ಡಿಸಿಪಿ ಪ್ರಿಯಂವದಾ ಅವರೂ ಪ್ರವೇಶ ಕಲ್ಪಿಸಲು ವಿಳಂಬ ಮಾಡಿದರು ಎಂದು ಪತ್ರಕರ್ತರು ಆರೋಪಿಸಿದ್ದಾರೆ. ಬಳಿಕ ಶಾಸಕ ಟಿ.ಎಸ್. ಶ್ರೀವತ್ಸ ಸ್ಥಳಕ್ಕೆ ಆಗಮಿಸಿದ ನಂತರ ಪತ್ರಕರ್ತರಿಗೆ ಒಳಗೆ ಹೋಗಲು ಅವಕಾಶ ನೀಡಲಾಯಿತು.

ಆದರೆ, ಪತ್ರಕರ್ತರಿಗೆ ಅವಮಾನ ಮಾಡಿದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಧರ್ಮಾಪುರ ನಾರಾಯಣ ಪಟ್ಟು ಹಿಡಿದರು. ಬಳಿಕ ಹಿರಿಯ ಐಪಿಎಸ್ ಅಧಿಕಾರಿಯೊಬ್ಬರು ತಪ್ಪಿತಸ್ಥ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದ ನಂತರ ಪತ್ರಕರ್ತರು ಪ್ರತಿಭಟನೆ ಹಿಂಪಡೆದರು.

ಪ್ರತಿಭಟನೆಯಲ್ಲಿ ಆಂಶಿ ಪ್ರಸನ್ನ ಕುಮಾರ್, ಧರ್ಮಾಪುರ ನಾರಾಯಣ, ಮೂಗೂರು ನಂಜುಂಡಸ್ವಾಮಿ, ಪ್ರಗತಿ ಗೋಪಾಲಕೃಷ್ಣ, ಕೆ.ಪಿ. ನಾಗರಾಜ್, ರಾಮ್, ಕಾರ್ತಿಕ್, ಪ್ರಸನ್ನ, ಶೇಖರ್ ಕಿರುಗುಂದ, ಕೃಷ್ಣ ಸೇರಿದಂತೆ ಹಲವು ಪತ್ರಕರ್ತರು ಭಾಗವಹಿಸಿದ್ದರು.

- Advertisement -

Latest News

error: Content is protected !!