ಮಂಗಳೂರು: ಪ್ರತಿಭಟನೆ ನಡೆಸಲು ಬಯಸುವವರಿಗೆ ಪೊಲೀಸರು ಎಂದಿಗೂ ಅನುಮತಿ ನಿರಾಕರಿಸಿಲ್ಲ. ಶಾಂತಿಭಂಗವಾಗುವ ಸಾಧ್ಯತೆ ಇರುವ ಸಂದರ್ಭಗಳಲ್ಲಿ ಮಾತ್ರ ಕೆಲವು ಷರತ್ತುಗಳನ್ನು ವಿಧಿಸಲಾಗುತ್ತದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ಆಗ್ನೆಸ್ ಕಾಲೇಜು ಬಳಿ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಪ್ರತಿಭಟನಾಕಾರರು ಪೊಲೀಸರಿಂದ ಯಾವುದೇ ಅನುಮತಿ ಪಡೆದಿರಲಿಲ್ಲ ಅಥವಾ ಮುಂಚಿತ ಮಾಹಿತಿಯನ್ನೂ ನೀಡಿರಲಿಲ್ಲ ಎಂದು ತಿಳಿಸಿದ್ದಾರೆ.
ಕಾಲೇಜಿನ ವಿದ್ಯಾರ್ಥಿಗಳ ವಿರುದ್ಧ ಪೊಲೀಸರು ಯಾವುದೇ ಕಠಿಣ ಕ್ರಮ ಕೈಗೊಂಡಿಲ್ಲ. ಬದಲಾಗಿ, ಅವರಿಗೆ ಪ್ರತಿಭಟನೆ ನಡೆಸಲು ಅವಕಾಶ ನೀಡಿ ಅಗತ್ಯ ಸಹಕಾರ ಒದಗಿಸಲಾಗಿತ್ತು. ಆದರೆ ಹೊರಗಿನಿಂದ ಬಂದ ಕೆಲವರು ಕಾಲೇಜಿನೊಳಗೆ ಪ್ರವೇಶಿಸಲು ಯತ್ನಿಸಿದಾಗ, ಕಾಲೇಜು ಆಡಳಿತ ಮಂಡಳಿ ದೂರು ನೀಡಿದರೆ ಅದು ಅತಿಕ್ರಮ ಪ್ರವೇಶವಾಗುವ ಸಾಧ್ಯತೆ ಇದ್ದುದರಿಂದ ಅವರನ್ನು ಒಳಗೆ ಪ್ರವೇಶಿಸದಂತೆ ತಡೆಯಲಾಯಿತು ಎಂದು ಹೇಳಿದ್ದಾರೆ.
ವಶಕ್ಕೆ ಪಡೆದವರಿಂದ ಮುಂದೆ ಇಂತಹ ಕೃತ್ಯಗಳನ್ನು ಪುನರಾವರ್ತಿಸುವುದಿಲ್ಲ ಎಂಬ ಮುಚ್ಚಳಿಕೆ ಪಡೆಯಲು ಉದ್ದೇಶಿಸಲಾಗಿತ್ತು. ಆದರೆ ಅವರು ವಿದ್ಯಾರ್ಥಿಗಳೆಂಬ ಕಾರಣಕ್ಕೆ ಅವರ ಮನವಿಯನ್ನು ಪರಿಗಣಿಸಿ ಉದಾರ ನಿಲುವು ತಳೆಯಲಾಯಿತು ಎಂದು ತಿಳಿಸಿದ್ದಾರೆ.
ಇಷ್ಟಾದರೂ, ಕಾಲೇಜು ಆಡಳಿತ ಮಂಡಳಿ ಅವರ ಬೇಡಿಕೆಗಳಿಗೆ ಸ್ಪಂದಿಸಿದ ಬಳಿಕವೂ ಅವರು ಮಧ್ಯಾಹ್ನ ಮತ್ತೆ ಸ್ಥಳಕ್ಕೆ ತೆರಳಿ ವಿದ್ಯಾರ್ಥಿಗಳನ್ನು ಪ್ರಚೋದಿಸಲು ಯತ್ನಿಸಿದರು. ಈ ಹಿನ್ನೆಲೆಯಲ್ಲಿ ಅವರನ್ನು ಮತ್ತೊಮ್ಮೆ ವಶಕ್ಕೆ ಪಡೆದು ಬಳಿಕ ಬಿಡುಗಡೆ ಮಾಡಲಾಯಿತು ಎಂದು ಪೊಲೀಸ್ ಆಯುಕ್ತರು ಸ್ಪಷ್ಟಪಡಿಸಿದ್ದಾರೆ.


