ಕೇರಳದ ತ್ರಿಶೂರ್ನ ವಲಪ್ಪಾಡ್ ಬೀಚ್ ಸಮೀಪ ಗುರುವಾರ ಬೆಳಗಿನ ಜಾವ ನಡೆದ ಕೌಟುಂಬಿಕ ಕಲಹದ ಭೀಕರ ದುರಂತದಲ್ಲಿ 24 ವರ್ಷದ ತಾಯಿ ಮತ್ತು ನಾಲ್ಕೂವರೆ ವರ್ಷದ ಮಗುವನ್ನು ಬ್ಲೇಡ್ನಿಂದ ಕತ್ತು ಸೀಳಿ ಕೊಲೆ ಮಾಡಲಾಗಿದೆ. ಕೃತ್ಯದ ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ ಪತಿ ಗಂಭೀರ ಸ್ಥಿತಿಯಲ್ಲಿದ್ದಾನೆ.
ವಿಸ್ಮಯ (24) ಹಾಗೂ ಅವರ ಪುತ್ರ ದಕ್ಷಿಣ್ (4.5) ಕೊಲೆಯಾದ ದುರ್ದೈವಿಗಳು. ಲಾರಿ ಚಾಲಕನಾದ ಪತಿ ವಿಜೇಶ್ (44) ಕೃತ್ಯ ಎಸಗಿದ ಬಳಿಕ ತನ್ನ ಕುತ್ತಿಗೆಯನ್ನೂ ಕೊಯ್ದುಕೊಂಡಿದ್ದು, ತ್ರಿಶೂರ್ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಐಸಿಯುನಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ.
ಬುಧವಾರ ರಾತ್ರಿ ವಿಸ್ಮಯ ಅವರ ತಾಯಿ ಮನೆಗೆ ಬಂದಿದ್ದ ವಿಜೇಶ್, ಪತ್ನಿ ಹಾಗೂ ಮಗುವಿನೊಂದಿಗೆ ಮಲಗಿದ್ದನು. ಬೆಳಗಿನ ಜಾವ 1:30ರ ಸುಮಾರಿಗೆ ವಿಸ್ಮಯಳ ಕಿರುಚಾಟ ಕೇಳಿಬಂದಿದ್ದು, ಕುತ್ತಿಗೆಗೆ ಗಾಯಗೊಂಡು ರಕ್ತಸ್ರಾವವಾಗುತ್ತಿದ್ದ ವಿಸ್ಮಯ ಪ್ರಾಣ ಉಳಿಸಿಕೊಳ್ಳಲು ರಸ್ತೆಯಲ್ಲಿ ಓಡಿದ್ದಾರೆ. ಈ ವೇಳೆ ಕೋಣೆಯಲ್ಲಿದ್ದ ಮಗು ದಕ್ಷಿಣ್ ಕತ್ತನ್ನು ವಿಜೇಶ್ ಬ್ಲೇಡ್ನಿಂದ ಕೊಯ್ದು ಭೀಕರವಾಗಿ ಹತ್ಯೆ ಮಾಡಿದ್ದಾನೆ. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ತಾಯಿ ಹಾಗೂ ಮಗು ಇಬ್ಬರೂ ಮೃತಪಟ್ಟಿದ್ದಾರೆ.
ದಂಪತಿ ನಡುವಿನ ಕೌಟುಂಬಿಕ ಕಲಹವೇ ಈ ಅಘಾತಕಾರಿ ಕೃತ್ಯಕ್ಕೆ ಕಾರಣವೆಂದು ಶಂಕಿಸಲಾಗಿದ್ದು, ಕೊಡಂಗಲ್ಲೂರು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.


