ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಭದ್ರತಾ ಕಾರ್ಯದಲ್ಲಿ ತೊಡಗಿರುವ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಸಿಬ್ಬಂದಿಯ ಕಲ್ಯಾಣ ಹಾಗೂ ಕಾರ್ಯಾಚರಣಾ ಸನ್ನದ್ಧತೆಯನ್ನು ಹೆಚ್ಚಿಸುವ ಉದ್ದೇಶದಿಂದ ಕೈಕಂಬದ ಅದ್ಯಪಾದಿ ರಸ್ತೆಯಲ್ಲಿ ನಿರ್ಮಿಸಲಾದ ‘ವೀರ್ ಸದನ್’ ವಸತಿ ಸಮುಚ್ಛಯವನ್ನು ಸೋಮವಾರ ಉದ್ಘಾಟಿಸಲಾಯಿತು.
ಸಿಐಎಸ್ಎಫ್ ಮಹಾನಿರ್ದೇಶಕ ಪ್ರವೀರ್ ರಂಜನ್ ಅವರು ನೂತನ ವಸತಿ ಸಮುಚ್ಛಯವನ್ನು ಲೋಕಾರ್ಪಣೆಗೊಳಿಸಿದರು. ವಿಮಾನ ನಿಲ್ದಾಣ ಮತ್ತು ಪ್ರಯಾಣಿಕರ ಸುರಕ್ಷತೆಯಲ್ಲಿ ತೊಡಗಿರುವ ಸಿಬ್ಬಂದಿಗೆ ಸುರಕ್ಷಿತ, ಆರಾಮದಾಯಕ ಹಾಗೂ ಆಧುನಿಕ ವಸತಿ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಇದನ್ನು ನಿರ್ಮಿಸಲಾಗಿದೆ.
ವೀರ್ ಸದನ್ನಲ್ಲಿ ಸುಸಜ್ಜಿತ ವಸತಿ ಕೊಠಡಿಗಳು, ಮನರಂಜನೆ ಮತ್ತು ಸಾಮಾನ್ಯ ಕೊಠಡಿಗಳು, ಭೋಜನಾಲಯ, ನೈರ್ಮಲ್ಯ ವ್ಯವಸ್ಥೆ ಹಾಗೂ ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲಾಗಿದೆ. ಸಿಬ್ಬಂದಿಯ ಜೀವನಮಟ್ಟ, ಆರೋಗ್ಯ ಮತ್ತು ಯೋಗಕ್ಷೇಮ ಸುಧಾರಿಸುವುದರ ಜೊತೆಗೆ ಕರ್ತವ್ಯ ನಿರ್ವಹಣೆಗೆ ಪೂರಕ ವಾತಾವರಣ ನಿರ್ಮಿಸುವುದು ಇದರ ಉದ್ದೇಶವಾಗಿದೆ.
ದೇಶದ ಪ್ರಮುಖ ಸಾರ್ವಜನಿಕ ಮೂಲಸೌಕರ್ಯಗಳ ರಕ್ಷಣೆಯಲ್ಲಿ ತೊಡಗಿರುವ ಭದ್ರತಾ ಸಿಬ್ಬಂದಿಗೆ ಉತ್ತಮ ಜೀವನ ಪರಿಸ್ಥಿತಿಗಳನ್ನು ಒದಗಿಸುವ ಅಗತ್ಯವನ್ನು ಈ ಸಂದರ್ಭದಲ್ಲಿ ಮಹಾನಿರ್ದೇಶಕರು ಒತ್ತಿಹೇಳಿದರು. ಸಿಬ್ಬಂದಿಯ ಕಲ್ಯಾಣಕ್ಕಾಗಿ ಕೈಗೊಂಡಿರುವ ಈ ಕ್ರಮವನ್ನು ಅವರು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಸಿಐಎಸ್ಎಫ್ ಅಧಿಕಾರಿಗಳು, ವಿಮಾನ ನಿಲ್ದಾಣದ ಪ್ರಮುಖರು ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.


