ಮಂಗಳೂರು : ಸಿಬಿಐ ಹಾಗೂ ಮುಂಬೈ ಪೊಲೀಸ್ ಅಧಿಕಾರಿಗಳ ಹೆಸರಿನಲ್ಲಿ ‘ಡಿಜಿಟಲ್ ಅರೆಸ್ಟ್’ ಬೆದರಿಕೆಯೊಡ್ಡಿ 75 ವರ್ಷದ ವೃದ್ಧೆಯೊಬ್ಬರಿಂದ ಬರೋಬ್ಬರಿ ₹2 ಕೋಟಿ ಹಣ ದೋಚಿರುವ ಭಾರಿ ಸೈಬರ್ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಸಂತ್ರಸ್ತೆ ನೀಡಿದ ದೂರಿನನ್ವಯ ಮಂಗಳೂರಿನ ಸೈಬರ್ ಕ್ರೈಮ್ (CEN) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೆಪ್ಟೆಂಬರ್ 25ರಂದು ವೃದ್ಧೆಗೆ ಕರೆ ಮಾಡಿದ ವ್ಯಕ್ತಿಯೊಬ್ಬ ತಾನು ಮುಂಬೈ ಪೊಲೀಸರೆಂದು ಪರಿಚಯಿಸಿಕೊಂಡು, ಮನಿ ಲ್ಯಾಂಡರಿಂಗ್ ಹಾಗೂ ಡ್ರಗ್ಸ್ ಡೀಲಿಂಗ್ ಕೃತ್ಯಗಳಲ್ಲಿ ಭಾಗಿಯಾಗಿದ್ದೀರೆಂದು ಹೆದರಿಸಿದ್ದಾನೆ. ಬಳಿಕ ಸಿಬಿಐ ಅಧಿಕಾರಿ ಎಂದು ವಾಟ್ಸಾಪ್ ವೀಡಿಯೊ ಕಾಲ್ ಮಾಡಿದ ಮತ್ತೊಬ್ಬ ವಂಚಕ, ಪ್ರಕರಣ ಸುಪ್ರೀಂ ಕೋರ್ಟ್ ವ್ಯಾಪ್ತಿಯಲ್ಲಿದೆ ಎಂದು ನಂಬಿಸಿ ‘ಡಿಜಿಟಲ್ ಅರೆಸ್ಟ್’ ಹೆಸರಿನಲ್ಲಿ ಬೆದರಿಸಿದ್ದಾನೆ.
ಬ್ಯಾಂಕ್ ಖಾತೆಗಳ ಪರಿಶೀಲನೆ ನೆಪದಲ್ಲಿ ವೃದ್ಧೆಯನ್ನು ನಂಬಿಸಿದ ವಂಚಕರು, ಸೂಚಿತ ಬ್ಯಾಂಕ್ ಖಾತೆಗೆ ಹಂತ ಹಂತವಾಗಿ ಹಣ ವರ್ಗಾಯಿಸಲು ಸೂಚಿಸಿದ್ದಾರೆ. ಅದರಂತೆ ವೃದ್ಧೆಯು ಸೆಪ್ಟೆಂಬರ್ 25ರಿಂದ ಅಕ್ಟೋಬರ್ 5ರ ನಡುವೆ ಒಟ್ಟು ₹2 ಕೋಟಿ ಹಣವನ್ನು ಆರ್ಟಿಜಿಎಸ್ (RTGS) ಮೂಲಕ ವರ್ಗಾಯಿಸಿ ಮೋಸ ಹೋಗಿದ್ದಾರೆ. ಸದ್ಯ ಸೈಬರ್ ಪೊಲೀಸರು ಐಟಿ ಆಕ್ಟ್ ಹಾಗೂ ಬಿಎನ್ಎಸ್ ಕಾಯ್ದೆಯಡಿ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.


