Wednesday, October 7, 2026
Homeಕರಾವಳಿಮಂಗಳೂರುದಟ್ಟ ಕಾಡಿನ ಬಾಂಜಾರುಮಲೆಯಲ್ಲಿ ಇಂದು 'ಮಲೆ ಶಂಕರ' ತಾಳಮದ್ದಳೆ: ಯಕ್ಷಭಾರತಿಯಿಂದ ವಿನೂತನ ಯತ್ನ

ದಟ್ಟ ಕಾಡಿನ ಬಾಂಜಾರುಮಲೆಯಲ್ಲಿ ಇಂದು ‘ಮಲೆ ಶಂಕರ’ ತಾಳಮದ್ದಳೆ: ಯಕ್ಷಭಾರತಿಯಿಂದ ವಿನೂತನ ಯತ್ನ

- Advertisement -
- Advertisement -

ಬೆಳ್ತಂಗಡಿ: ಪಶ್ಚಿಮ ಘಟ್ಟಗಳ ದಟ್ಟ ಅರಣ್ಯದ ಮಡಿಲಲ್ಲಿರುವ, ಆಧುನಿಕ ಸೌಲಭ್ಯಗಳಿಂದ ದೂರ ಉಳಿದಿರುವ ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮ ವ್ಯಾಪ್ತಿಯ ದುರ್ಗಮ ಹಳ್ಳಿ ‘ಬಾಂಜಾರುಮಲೆ’ಯಲ್ಲಿ ಇಂದು ದಿನಾಂಕ 7-10-2026 ರಂದು ‘ಯಕ್ಷಭಾರತಿ’ ಸಂಸ್ಥೆಯ ವತಿಯಿಂದ ವಿಶೇಷ ಹಾಗೂ ಅರ್ಥಪೂರ್ಣ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆಯಾಗಿದೆ.

ಮಂಗಳೂರು-ಚಿಕ್ಕಮಗಳೂರು ಸಂಪರ್ಕಿಸುವ ಚಾರ್ಮಾಡಿ ಘಾಟ್ ರಸ್ತೆಯ 9ನೇ ತಿರುವಿನಿಂದ ಕಡಿದಾದ ಕಾಡಿನ ಹಾದಿಯಲ್ಲಿ ಸುಮಾರು 9 ರಿಂದ 11 ಕಿಲೋಮೀಟರ್ ಒಳಭಾಗದಲ್ಲಿರುವ ಬಾಂಜಾರುಮಲೆ ಅತ್ಯಂತ ಕಷ್ಟಕರ ಭೂಪ್ರದೇಶವಾಗಿದೆ. ಚಾರ್ಮಾಡಿ ಶ್ರೇಣಿಯ ದಟ್ಟ ಕಾಡು, ಮುಗಿಲೆತ್ತರದ ಬೆಟ್ಟಗಳು ಹಾಗೂ ಜಲಪಾತಗಳ ನಡುವೆ ಇರುವ ಈ ಊರಿನಲ್ಲಿ ಶತಮಾನಗಳಿಂದ ‘ಮಲೆಕುಡಿಯ’ ಜನಾಂಗದವರು ವಾಸಿಸುತ್ತಿದ್ದಾರೆ. ಒಟ್ಟು 49 ಮನೆಗಳಿರುವ ಈ ಪುಟ್ಟ ಹಳ್ಳಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ಸರಿಯಾದ ರಸ್ತೆ, ನಿರಂತರ ವಿದ್ಯುತ್ ಹಾಗೂ ಮೊಬೈಲ್ ನೆಟ್‌ವರ್ಕ್ ಸೌಲಭ್ಯಗಳಿಲ್ಲದೆ ಜನರು ಇಂದಿಗೂ ಸವಾಲಿನ ಜೀವನ ನಡೆಸುತ್ತಿದ್ದಾರೆ.

ದಿನಪತ್ರಿಕೆಗಳೂ ತಲುಪದ, ಬಾಹ್ಯ ಪ್ರಪಂಚದ ಸಂಪರ್ಕವಿಲ್ಲದೆ ಕಠಿಣ ಪರಿಸರದಲ್ಲಿ ಬದುಕುತ್ತಿರುವ ಇಲ್ಲಿನ ಜನರೊಂದಿಗೆ ಬೆರೆತು ಸಂಭ್ರಮಿಸುವ ಉದ್ದೇಶದಿಂದ ‘ಯಕ್ಷಭಾರತಿ’ ಸಂಸ್ಥೆಯು ಇಂದು ‘ಮಲೆ ಶಂಕರ’ ಎಂಬ ಯಕ್ಷಗಾನ ತಾಳಮದ್ದಳೆ ಕಥಾ ಪ್ರಸ್ತುತಿಯನ್ನು ಹಮ್ಮಿಕೊಂಡಿದೆ.

ದುರ್ಗಮ ಅರಣ್ಯ ಹಾದಿಯನ್ನು ಸಾಗಿ ಸ್ಥಳೀಯ ಮಲೆಕುಡಿಯ ಜನಾಂಗದ ಸಮ್ಮುಖದಲ್ಲಿ ನಡೆಯಲಿರುವ ಈ ಪ್ರಸ್ತುತಿಯು, ಬಾಂಜಾರುಮಲೆಯ ಜನರಿಗೆ ಹೊಸ ಅನುಭವ ಹಾಗೂ ಸಾಂಸ್ಕೃತಿಕ ರಸದೌತಣ ನೀಡಲಿದೆ. ಯಕ್ಷಭಾರತಿ ಸಂಸ್ಥೆಯ ಈ ಅರ್ಥಪೂರ್ಣ ಮಾದರಿ ಕಾರ್ಯಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

- Advertisement -

Latest News

error: Content is protected !!