Monday, October 5, 2026
Homeಕರಾವಳಿಮಂಗಳೂರುಕಾರುಗಳ ನಡುವೆ ಭೀಕರ ಅಪಘಾತ ;ಮಂತ್ರಾಲಯಕ್ಕೆ ಹೋಗುತ್ತಿದ್ದ ಬೆಳ್ತಂಗಡಿ ಮೂಲದ ಯುವಕ ಸಾವು

ಕಾರುಗಳ ನಡುವೆ ಭೀಕರ ಅಪಘಾತ ;ಮಂತ್ರಾಲಯಕ್ಕೆ ಹೋಗುತ್ತಿದ್ದ ಬೆಳ್ತಂಗಡಿ ಮೂಲದ ಯುವಕ ಸಾವು

- Advertisement -
- Advertisement -

ಬೆಳ್ತಂಗಡಿ: ಸ್ನೇಹಿತರೊಂದಿಗೆ ಕಾರಿನಲ್ಲಿ ಮಂತ್ರಾಲಯಕ್ಕೆ ತೆರಳುತ್ತಿದ್ದ ವೇಳೆ ಎದುರಿನಿಂದ ಬಂದ ಮತ್ತೊಂದು ಕಾರು ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ನಡೆದಿದೆ.ಬೆಳ್ತಂಗಡಿ ತಾಲೂಕಿನ ಶಿಶಿಲ ಗ್ರಾಮದ ಮಂತಾಜೆ ನಿವಾಸಿ ದೀಪೇಶ್ (27) ಮೃತಪಟ್ಟ ಯುವಕ.

ಘಟನೆಯ ವಿವರ:

ಸೆಪ್ಟೆಂಬರ್ 29ರಂದು ನಸುಕಿನ ಜಾವ ಶಿಶಿಲದಿಂದ ದೀಪೇಶ್, ರಘು, ಮಾಜಿ ಗ್ರಾ.ಪಂ. ಅಧ್ಯಕ್ಷ ಸುಧೀನ್, ಸತೀಶ, ದೀಪಕ್ ಹಾಗೂ ಶೋಭಿತ್ ಎಂಬ ಆರು ಮಂದಿ ಸ್ನೇಹಿತರು ಇನೋವಾ ಕಾರಿನಲ್ಲಿ ಮಂತ್ರಾಲಯಕ್ಕೆ ಹೊರಟಿದ್ದರು. ಉಜಿರೆ–ಚಾರ್ಮಾಡಿ ಮಾರ್ಗವಾಗಿ ಬಣಕಲ್ ದಾಟಿ ಮೂಡಿಗೆರೆ ಕಡೆಗೆ ತೆರಳುತ್ತಿದ್ದಾಗ, ಸಬ್ಬೇನಹಳ್ಳಿ ಗ್ರಾಮದ ಸಮೀಪ ರಾಷ್ಟ್ರೀಯ ಹೆದ್ದಾರಿ 73ರಲ್ಲಿ ಎದುರಿನಿಂದ ವೇಗವಾಗಿ ಬಂದ ಫೋರ್ಡ್ ಎಂಡೀವರ್ ಕಾರು ಇನೋವಾಗೆ ನೇರವಾಗಿ ಡಿಕ್ಕಿ ಹೊಡೆದಿದೆ. ಎಂಡೀವರ್ ಕಾರನ್ನು ಆಲ್ದೂರು ನಿವಾಸಿ ಅಮೋಘ್ ಡಿ.ಎಸ್. ಚಾಲನೆ ಮಾಡುತ್ತಿದ್ದರೆನ್ನಲಾಗಿದೆ.

ಅಪಘಾತದಲ್ಲಿ ಇನೋವಾದಲ್ಲಿದ್ದ ಆರೂ ಮಂದಿ ಗಾಯಗೊಂಡಿದ್ದು, ದೀಪೇಶ್ ಅವರ ಕುತ್ತಿಗೆಗೆ ಹಾಗೂ ಸುಧೀನ್ ಅವರ ಭುಜಕ್ಕೆ ಗಂಭೀರ ಗಾಯಗಳಾಗಿದ್ದವು. ತಕ್ಷಣವೇ ಗಾಯಾಳುಗಳನ್ನು ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ತೀವ್ರ ಗಾಯಗೊಂಡಿದ್ದ ದೀಪೇಶ್ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ. ಮೃತರು ತಾಯಿ ಹಾಗೂ ಇಬ್ಬರು ಸಹೋದರರನ್ನು ಅಗಲಿದ್ದಾರೆ.

ಪೊಲೀಸರ ವಿರುದ್ಧ ಗಾಯಾಳುಗಳ ಗಂಭೀರ ಆರೋಪ:

ಅಪಘಾತಕ್ಕೆ ಕಾರಣವಾದ ಎಂಡೀವರ್ ಕಾರಿನ ಚಾಲಕ ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿದ್ದ. ಈ ವಿಚಾರವನ್ನು ಬಣಕಲ್ ಪೊಲೀಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ದಿಲೀಪ್ ಅವರ ಗಮನಕ್ಕೆ ತಂದು, ಚಾಲಕನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದರೂ ಸಹ, ಎಫ್‌ಐಆರ್‌ನಲ್ಲಿ (FIR) ಚಾಲಕ ಮದ್ಯಪಾನ ಮಾಡಿದ್ದ ವಿಷಯವನ್ನು ಉಲ್ಲೇಖಿಸಿಲ್ಲ ಎಂದು ಗಾಯಾಳುಗಳು ಗಂಭೀರವಾಗಿ ಆಕ್ಷೇಪಿಸಿದ್ದಾರೆ. ಅಲ್ಲದೆ, ಈ ಕುರಿತು ಪ್ರಶ್ನಿಸಿದಾಗ ಪೊಲೀಸ್ ಅಧಿಕಾರಿಯೊಬ್ಬರು ದುರ್ವರ್ತನೆ ತೋರಿದ್ದಾರೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ.

- Advertisement -

Latest News

error: Content is protected !!