ಪುತ್ತೂರು : ಪಿಕಪ್ ವಾಹನವೊಂದರಲ್ಲಿ ಅಕ್ರಮವಾಗಿ ಕೇರಳದ ಕಡೆಗೆ ಜಾನುವಾರು ಸಾಗಿಸುತ್ತಿದ್ದ ಜಾಲವನ್ನು ಪತ್ತೆಹಚ್ಚಿರುವ ಪುತ್ತೂರು ಗ್ರಾಮಾಂತರ ಠಾಣೆ ಪೊಲೀಸರು, 11 ಜಾನುವಾರುಗಳನ್ನು ರಕ್ಷಿಸಿ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.ಪುತ್ತೂರಿನ ಆರ್ಯಾಪು ನಿವಾಸಿ ಶಿವಪ್ರಸಾದ್ (52) ಬಂಧಿತ ಆರೋಪಿ.
ಘಟನೆಯ ವಿವರ:
ದಿನಾಂಕ 05.10.2026 ರಂದು ಬೆಳಗಿನ ಜಾವ ಪಿಕಪ್ ವಾಹನದಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಕೇರಳಕ್ಕೆ ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ಸುಷ್ಮಾ ಜಿ. ಭಂಡಾರಿ ಅವರಿಗೆ ಲಭಿಸಿದೆ. ತಕ್ಷಣವೇ ಸಿಬ್ಬಂದಿಯೊಂದಿಗೆ ಕಾರ್ಯಪ್ರವೃತ್ತರಾದ ಅವರು, ಪುತ್ತೂರು ತಾಲೂಕಿನ ಬಲ್ನಾಡು ಗ್ರಾಮದ ಬಿಳಿಯೂರುಕಟ್ಟೆ ಎಂಬಲ್ಲಿ KA-19-AF-8558 ನೋಂದಣಿಯ ಪಿಕಪ್ ವಾಹನವನ್ನು ತಡೆದಿದ್ದಾರೆ.
ಈ ವೇಳೆ ಪೊಲೀಸರನ್ನು ಕಂಡು ವಾಹನದ ಚಾಲಕ ಹಾಗೂ ಮತ್ತೊಬ್ಬ ವ್ಯಕ್ತಿ ಪರಾರಿಯಾಗಿದ್ದಾರೆ. ವಾಹನವನ್ನು ಪರಿಶೀಲಿಸಿದಾಗ ಯಾವುದೇ ಪರವಾನಿಗೆಯಿಲ್ಲದೆ, ಮಾಂಸ ಮಾರಾಟ ಮಾಡುವ ಉದ್ದೇಶದಿಂದ 11 ಜಾನುವಾರುಗಳನ್ನು ಅತ್ಯಂತ ಹಿಂಸಾತ್ಮಕವಾಗಿ ತುಂಬಿರುವುದು ಕಂಡುಬಂದಿದೆ.
ಘಟನೆಗೆ ಸಂಬಂಧಿಸಿ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ (ಅ.ಕ್ರ: 125-2026) ದಾಖಲಾಗಿದ್ದು, ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ 2020 ಹಾಗೂ ಪ್ರಾಣಿ ಹಿಂಸೆ ತಡೆ ಕಾಯ್ದೆಯಡಿ ತನಿಖೆ ಕೈಗೆತ್ತಿಕೊಳ್ಳಲಾಗಿದೆ. ತನಿಖೆ ಮುಂದುವರಿಸಿದ ಪೊಲೀಸರು, ಸೂಕ್ತ ಪರವಾನಿಗೆ ಇಲ್ಲದೆ ಜಾನುವಾರುಗಳನ್ನು ಮಾರಾಟ ಮಾಡಿದ್ದ ಆರೋಪಿ ಶಿವಪ್ರಸಾದ್‌ನನ್ನು ದಸ್ತಗಿರಿ ಮಾಡಿದ್ದಾರೆ. ಪರಾರಿಯಾದ ಇತರೆ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ.


