ಮಂಗಳೂರು: ಕಾಲೇಜು ಸಮೀಪ ವಿದ್ಯಾರ್ಥಿಯೊಬ್ಬನ ಮೇಲೆ ಚೂರಿಯಿಂದ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುವ ಘಟನೆ ಅಕ್ಟೋಬರ್ 3ರಂದು ನಗರದ ಬಳ್ಳಾಲ್‌ಭಾಗ್‌ನಲ್ಲಿ ನಡೆದಿದೆ.ಹಲ್ಲೆಗೊಳಗಾದವರನ್ನು ಬೆಳ್ತಂಗಡಿ ಮೂಲದ, ಶ್ರೀದೇವಿ ಕಾಲೇಜಿನಲ್ಲಿ ಅಂತಿಮ ವರ್ಷದ ಬಿ.ಸಿ.ಎ ವ್ಯಾಸಂಗ ಮಾಡುತ್ತಿರುವ ಮಹಮ್ಮದ್ ಉನೈಸ್ (20) ಎಂದು ಗುರುತಿಸಲಾಗಿದೆ.
ಘಟನೆಯ ವಿವರ: ಅಕ್ಟೋಬರ್ 3ರಂದು ಬೆಳಿಗ್ಗೆ ಕಾಲೇಜಿನ ಸಮೀಪದ ಟರ್ಫ್‌ನಲ್ಲಿ ಉನೈಸ್‌ನ ಸ್ನೇಹಿತ ರಾಯಿಝ್ ಹಾಗೂ ಪ್ರಥಮ ವರ್ಷದ ಬಿಕಾಂ ವಿದ್ಯಾರ್ಥಿ ರಿಯಾನ್ ನಡುವೆ ಜಗಳ ನಡೆದಿದೆ. ಈ ವೇಳೆ ಉನೈಸ್ ಜಗಳ ಬಿಡಿಸಲು ಮಧ್ಯಪ್ರವೇಶಿಸಿದ್ದರೆನ್ನಲಾಗಿದೆ.
ಬಿಕಬಿಕಿನ ನಂತರ, ಮಧ್ಯಾಹ್ನ ಸುಮಾರು 1:45ರ ವೇಳೆಗೆ ಉನೈಸ್ ಕಾಲೇಜಿನ ಕ್ಯಾಂಟೀನ್ ಬಳಿ ನಿಂತಿದ್ದಾಗ, ಆರೋಪಿ ರಿಯಾನ್ ಸೇರಿದಂತೆ ಐವರು ದ್ವಿಚಕ್ರ ವಾಹನಗಳಲ್ಲಿ ಬಂದು ಏಕಾಏಕಿ ದಾಳಿ ನಡೆಸಿದ್ದಾರೆ. ಚೂರಿಯಿಂದ ತಲೆ, ಬೆನ್ನು ಹಾಗೂ ಎಡಕಿವಿಗೆ ಇರಿದು ಕೊಲೆ ಬೆದರಿಕೆ ಹಾಕಿದ್ದಾರೆ. ಗಂಭೀರವಾಗಿ ಗಾಯಗೊಂಡ ಉನೈಸ್ ಅವರನ್ನು ಮಂಗಳೂರಿನ ಸರ್ಕಾರಿ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಉನೈಸ್ ನೀಡಿದ ದೂರಿನ ಆಧಾರದ ಮೇಲೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಯಡಿ ಪ್ರಕರಣ ದಾಖಲಾಗಿದ್ದು (ಕ್ರೈಂ ನಂ. 88/2026), ಪೊಲೀಸರು ಆರೋಪಿಗಳಿಗಾಗಿ ತನಿಖೆ ಮುಂದುವರಿಸಿದ್ದಾರೆ.


