Saturday, October 3, 2026
Homeಕ್ರೀಡೆಏಷನ್ಸ್‌ ಗೇಮ್ಸ್‌ ಫೈನಲ್; ಪಾಕ್ ವಿರುದ್ಧ ರೋಚಕ ಜಯಗಳಿಸಿ ಚಿನ್ನ ಗೆದ್ದ ಭಾರತ

ಏಷನ್ಸ್‌ ಗೇಮ್ಸ್‌ ಫೈನಲ್; ಪಾಕ್ ವಿರುದ್ಧ ರೋಚಕ ಜಯಗಳಿಸಿ ಚಿನ್ನ ಗೆದ್ದ ಭಾರತ

- Advertisement -
- Advertisement -

ಜಪಾನ್‌ನ ನಿಶಿನ್‌ನ ಕೊರೋಗಿ ಸ್ಪೋರ್ಟ್ಸ್ ಪಾರ್ಕ್‌ನಲ್ಲಿ ಶನಿವಾರ ನಡೆದ 20ನೇ ಏಷ್ಯನ್ ಗೇಮ್ಸ್‌ನ ಪುರುಷರ T20 ಕ್ರಿಕೆಟ್ ಫೈನಲ್‌ನಲ್ಲಿ ಪಾಕಿಸ್ತಾನವನ್ನು 19 ರನ್‌ಗಳಿಂದ ಮಣಿಸಿದ ಭಾರತ ಚಿನ್ನದ ಪದಕವನ್ನು ಪಡೆದು, ಭರ್ಜರಿ ಗೆಲುವನ್ನು ಗಳಿಸಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತ, 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 211 ರನ್‌ಗಳ ಬೃಹತ್ ಮೊತ್ತ ದಾಖಲಿಸಿತು. ಗುರಿ ಬೆನ್ನತ್ತಿದ ಪಾಕಿಸ್ತಾನ ತಂಡ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 192 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು.

ಭಾರತದ ಪರ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಸ್ಫೋಟಕ ಬ್ಯಾಟಿಂಗ್ ನಡೆಸಿ 28 ಎಸೆತಗಳಲ್ಲಿ 61 ರನ್ ಸಿಡಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 3 ಬೌಂಡರಿ ಹಾಗೂ 7 ಸಿಕ್ಸರ್‌ಗಳಿದ್ದವು. ವೈಭವ್ ಸೂರ್ಯವಂಶಿ 9 ಎಸೆತಗಳಲ್ಲಿ 15, ಇಶಾನ್ ಕಿಶನ್ 18 ಎಸೆತಗಳಲ್ಲಿ 20 ಹಾಗೂ ಶ್ರೇಯಸ್ ಅಯ್ಯರ್ 24 ಎಸೆತಗಳಲ್ಲಿ 21 ರನ್ ಗಳಿಸಿದರು.

ಮಧ್ಯಮ ಕ್ರಮಾಂಕದಲ್ಲಿ ತಿಲಕ್ ವರ್ಮಾ ಅಬ್ಬರದ ಬ್ಯಾಟಿಂಗ್ ಮೂಲಕ ಭಾರತದ ಮೊತ್ತವನ್ನು ಮತ್ತಷ್ಟು ಹೆಚ್ಚಿಸಿದರು. ಕೇವಲ 22 ಎಸೆತಗಳಲ್ಲಿ ಅಜೇಯ 51 ರನ್ ಗಳಿಸಿದ ಅವರು 3 ಬೌಂಡರಿ ಹಾಗೂ 4 ಸಿಕ್ಸರ್‌ಗಳನ್ನು ಸಿಡಿಸಿದರು. ಶಿವಂ ದುಬೆ 15 ಎಸೆತಗಳಲ್ಲಿ 27 ರನ್ ಗಳಿಸಿದರು. ಸಂಜು ಸ್ಯಾಮ್ಸನ್ 2 ರನ್ ಗಳಿಸಿದರೆ, ಅಕ್ಷರ್ ಪಟೇಲ್ 1 ರನ್ ಗಳಿಸಿ ಅಜೇಯರಾಗಿ ಉಳಿದರು.

ಪಾಕಿಸ್ತಾನದ ಬೌಲಿಂಗ್‌ನಲ್ಲಿ ಅಹ್ಮದ್ ದಾನಿಯಾಲ್ ಹಾಗೂ ಅರಾಫತ್ ಮಿನ್ಹಾಸ್ ತಲಾ 2 ವಿಕೆಟ್ ಪಡೆದರು. ಅಬ್ರಾರ್ ಅಹ್ಮದ್ ಹಾಗೂ ಸೈಮ್ ಅಯೂಬ್ ತಲಾ ಒಂದು ವಿಕೆಟ್ ಕಬಳಿಸಿದರು. 211 ರನ್‌ಗಳ ಗುರಿ ಬೆನ್ನತ್ತಿದ ಪಾಕಿಸ್ತಾನ ಆರಂಭದಲ್ಲೇ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡಿತು. ನಾಯಕ ಸಾಹಿಬ್ಜಾದಾ ಫರ್ಹಾನ್ 10, ಉಸ್ಮಾನ್ ಖಾನ್ 3 ಹಾಗೂ ಮಾಜ್ ಸದಾಕತ್ 23 ರನ್ ಗಳಿಸಿದರು. ಸೈಮ್ ಅಯೂಬ್ 22 ಎಸೆತಗಳಲ್ಲಿ 29 ರನ್ ಗಳಿಸಿದರು.

ಆದರೆ ನಂತರದ ಹಂತದಲ್ಲಿ ಪಾಕಿಸ್ತಾನದ ಬ್ಯಾಟರ್‌ಗಳು ಪ್ರತಿರೋಧ ತೋರಿದರೂ, ಭಾರತದ ಬೌಲರ್‌ಗಳು ಗುರಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾದರು. ಅಂತಿಮವಾಗಿ ಪಾಕಿಸ್ತಾನ 20 ಓವರ್‌ಗಳಲ್ಲಿ 192 ರನ್ ಗಳಿಸಿ 19 ರನ್‌ಗಳಿಂದ ಸೋಲನುಭವಿಸಿತು.

- Advertisement -

Latest News

error: Content is protected !!