ಬೆಂಗಳೂರು: ನಂದಿನಿ ಹಾಲಿನ ಖರೀದಿ ಮತ್ತು ಮಾರಾಟ ದರವನ್ನು ಪ್ರತಿ ಲೀಟರ್ಗೆ ₹8ರಿಂದ ₹10ರಷ್ಟು ಹೆಚ್ಚಿಸುವಂತೆ ಕರ್ನಾಟಕ ರಾಜ್ಯ ಸಹಕಾರ ಹಾಲು ಉತ್ಪಾದಕರ ಒಕ್ಕೂಟಗಳ (ಕೆಎಂಎಫ್) ನಿಯೋಗ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದೆ.
ವಿಧಾನಸೌಧದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ನಿಯೋಗದ ಪರವಾಗಿ ಮಾತನಾಡಿದ ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ್, ಪಶು ಆಹಾರ, ಮೇವು ಹಾಗೂ ನಿರ್ವಹಣಾ ವೆಚ್ಚ ನಿರಂತರವಾಗಿ ಏರಿಕೆಯಾಗುತ್ತಿರುವುದರಿಂದ ರೈತರು ಸಂಕಷ್ಟದಲ್ಲಿದ್ದಾರೆ. ಕಳೆದ ಒಂದೂವರೆ ವರ್ಷದಿಂದ ಹಾಲಿನ ದರ ಹೆಚ್ಚಿಸಿಲ್ಲ. ನೆರೆಯ ರಾಜ್ಯಗಳಾದ ಆಂಧ್ರಪ್ರದೇಶ, ಕೇರಳ, ಮಹಾರಾಷ್ಟ್ರ ಹಾಗೂ ತಮಿಳುನಾಡಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಹಾಲಿನ ಖರೀದಿ ಮತ್ತು ಮಾರಾಟ ದರ ಲೀಟರ್ಗೆ ಕನಿಷ್ಠ ₹12ರಷ್ಟು ಕಡಿಮೆಯಿದೆ ಎಂದು ವಿವರಣೆ ನೀಡಿದರು.
ಮನವಿ ಸ್ವೀಕರಿಸಿದ ಸಿಎಂ ಡಿ.ಕೆ. ಶಿವಕುಮಾರ್, ಕಳೆದ 10 ವರ್ಷಗಳಲ್ಲಿ ಪಶು ಆಹಾರ ದರ ಹೆಚ್ಚಳ, ಉತ್ಪಾದನಾ ವೆಚ್ಚ, ಹಾಲು ಶೇಖರಣೆ ಪ್ರಮಾಣ ಹಾಗೂ ನೆರೆಯ ರಾಜ್ಯಗಳ ದರ ವಿವರಗಳು ಸೇರಿದಂತೆ ಸಮಗ್ರ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.


