Thursday, September 24, 2026
Homeಕರಾವಳಿಮಂಗಳೂರುಮಂಗಳೂರು:ಕೋರ್ಟ್‌ ಆವರಣದಿಂದ ಪರಾರಿಯಾಗಿದ್ದ ಕೊಲೆ ಆರೋಪಿ 24 ಗಂಟೆಯಲ್ಲೇ ಬಂಧನ

ಮಂಗಳೂರು:ಕೋರ್ಟ್‌ ಆವರಣದಿಂದ ಪರಾರಿಯಾಗಿದ್ದ ಕೊಲೆ ಆರೋಪಿ 24 ಗಂಟೆಯಲ್ಲೇ ಬಂಧನ

- Advertisement -
- Advertisement -

ಮಂಗಳೂರು: ಜೈಲಿಗೆ ರವಾನಿಸುವ ವೇಳೆ ಶೌಚಾಲಯದ ನೆಪವೊಡ್ಡಿ ಮಂಗಳೂರು ಕೋರ್ಟ್ ಆವರಣದಿಂದ ಪೊಲೀಸರ ಕಣ್ಣು ತಪ್ಪಿಸಿ ಪರಾರಿಯಾಗಿದ್ದ ಕೊಲೆ ಪ್ರಕರಣದ ಪ್ರಮುಖ ಆರೋಪಿಯನ್ನು ಮಂಗಳೂರು ಕಮಿಷನರೇಟ್ ಪೊಲೀಸರು ಕೇವಲ 24 ಗಂಟೆಗಳಲ್ಲಿ ಬಂಧಿಸಿದ್ದಾರೆ.

ಮೂಡುಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆ ಪ್ರಕರಣದ ಆರೋಪಿ ಪ್ರಸಾದ್ ಬಂಧಿತ ವ್ಯಕ್ತಿ ಎಂದು ನಗರ ಪೊಲೀಸ್ ಕಮಿಷನರ್ ಸಿ.ಹೆಚ್. ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

ಸೆಪ್ಟೆಂಬರ್ 22ರಂದು ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಮೂಡುಬಿದಿರೆ ಕೊಲೆ ಪ್ರಕರಣದ ವಿಚಾರಣೆ ನಿಗದಿಯಾಗಿತ್ತು. ಈ ಹಿಂದೆ ವಿಚಾರಣೆಗೆ ಗೈರುಹಾಜರಾಗಿದ್ದರಿಂದ ಆರೋಪಿ ಪ್ರಸಾದ್ ವಿರುದ್ಧ ನ್ಯಾಯಾಲಯ ಜಾಮೀನು ರಹಿತ ವಾರಂಟ್ (NBW) ಜಾರಿಗೊಳಿಸಿತ್ತು. ವಿಚಾರಣೆ ವೇಳೆ ಆತನ ಪರ ವಕೀಲರು ಹಾಜರಿರದ ಕಾರಣ, ನ್ಯಾಯಾಧೀಶರು ಆತನನ್ನು ಜೈಲಿಗೆ ಕಳುಹಿಸಲು ರಿಮಾಂಡ್ ವಾರಂಟ್ ಹೊರಡಿಸಿದ್ದರು.

ನ್ಯಾಯಾಲಯದ ಆದೇಶದಂತೆ ಆರೋಪಿಯನ್ನು ಮಂಗಳೂರು ಜಿಲ್ಲಾ ಕಾರಾಗೃಹಕ್ಕೆ ಕರೆದೊಯ್ಯಲು ಸಿದ್ಧತೆ ನಡೆಸಲಾಗುತ್ತಿತ್ತು. ಮಧ್ಯಾಹ್ನ 3:30 ರಿಂದ 3:45 ರ ಸುಮಾರಿಗೆ ನ್ಯಾಯಾಲಯದ ಆವರಣದಲ್ಲಿದ್ದಾಗ ಆರೋಪಿ ಪ್ರಸಾದ್ ಶೌಚಾಲಯಕ್ಕೆ ಹೋಗಬೇಕೆಂದು ಕೋರಿದ್ದಾನೆ. ಆತನನ್ನು ಶೌಚಾಲಯದ ಬಳಿ ಕರೆದೊಯ್ದಾಗ, ಜನದಟ್ಟಣೆಯ ಲಾಭ ಪಡೆದು ಪೊಲೀಸರ ಕಣ್ಣು ತಪ್ಪಿಸಿ ಅಲ್ಲಿಂದ ಕಾಲ್ಕಿತ್ತಿದ್ದ.

ಕರ್ತವ್ಯದಲ್ಲಿದ್ದ ಪೊಲೀಸ್ ಕಾನ್‌ಸ್ಟೇಬಲ್ ನೀಡಿದ ದೂರಿನಂತೆ ಮಂಗಳೂರು ಉತ್ತರ (ಬಂದರು) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ವಿಶೇಷ ತಂಡ ರಚಿಸಿ ತೀವ್ರ ಶೋಧ ನಡೆಸಿದ್ದರು. ಬುಧವಾರ ಸಂಜೆಯ ವೇಳೆಗೆ ಆರೋಪಿ ಪ್ರಸಾದ್‌ನನ್ನು ಪತ್ತೆ ಹಚ್ಚಿ ಮತ್ತೆ ವಶಕ್ಕೆ ಪಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

- Advertisement -

Latest News

error: Content is protected !!