ಸೂರತ್: ತನಗೆ ಬರಬೇಕಿದ್ದ ಕೇವಲ ₹10,000 ಬಾಕಿ ಸಂಬಳವನ್ನು ನೀಡಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಜವಳಿ ಮಾರುಕಟ್ಟೆಗೆ ಬೆಂಕಿ ಹಚ್ಚಿ, ಬರೋಬ್ಬರಿ ₹24 ಕೋಟಿ ಮೌಲ್ಯದ ಸೊತ್ತನ್ನು ಬೂದಿ ಮಾಡಿದ ಮಾಜಿ ಅಕೌಂಟೆಂಟ್‌ನನ್ನು ಸೂರತ್ ಕ್ರೈಮ್ ಬ್ರಾಂಚ್ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಮಹಾರಾಷ್ಟ್ರದ ಧುಳೆ ಮೂಲದ, ಮಾಜಿ ಲೆಕ್ಕಪರಿಶೋಧಕ ವಿನೋದ್ ಪಂಡಿತ್ ಸವಾಲೆ (ವಿನೋದ್ ಸಾಳ್ವೆ) ಎಂದು ಗುರುತಿಸಲಾಗಿದೆ.
ಘಟನೆಯ ವಿವರ: ಸೆಪ್ಟೆಂಬರ್ 8 ಮತ್ತು 9 ರ ಮಧ್ಯರಾತ್ರಿ ಸರೋಲಿ ಪ್ರದೇಶದ ಶ್ಯಾಮ್ ಸಂಗಿನಿ ಜವಳಿ ಮಾರುಕಟ್ಟೆಯಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿತ್ತು. ಆರಂಭದಲ್ಲಿ ಇದನ್ನು ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಎಂದು ಶಂಕಿಸಲಾಗಿತ್ತು. ಆದರೆ ಮಾರುಕಟ್ಟೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಆರೋಪಿಯ ಕೃತ್ಯ ಬಯಲಾಗಿದೆ.
ಮುಖಕ್ಕೆ ಬಿಳಿ ಬಟ್ಟೆ ಕಟ್ಟಿಕೊಂಡು ಬಂದಿದ್ದ ಆರೋಪಿ, 6ನೇ ಮಹಡಿಯ ಅಂಗಡಿ ಸಂಖ್ಯೆ 639ರ ಹೊರಗೆ ಇರಿಸಲಾಗಿದ್ದ ಬಟ್ಟೆಯ ಪಾರ್ಸೆಲ್‌ಗಳ ಮೇಲೆ ₹150 ಮೌಲ್ಯದ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೇವಲ 4 ನಿಮಿಷಗಳಲ್ಲಿ ಪರಾರಿಯಾಗಿದ್ದ. ಸುಮಾರು 14 ಗಂಟೆಗಳ ಕಾಲ ಉರಿದ ಈ ಬೆಂಕಿಗೆ 14ಕ್ಕೂ ಹೆಚ್ಚು ಅಂಗಡಿಗಳು ಹಾಗೂ 6ನೇ ಮಹಡಿ ಸಂಪೂರ್ಣ ಸುಟ್ಟು ಭಸ್ಮವಾಗಿದ್ದು, 5ನೇ ಮಹಡಿಗೂ ಅಪಾರ ಹಾನಿಯಾಗಿದೆ.
ಪೂರ್ವಯೋಜಿತ ಸಂಚು: ಆರೋಪಿ ವಿನೋದ್ 2026ರ ಏಪ್ರಿಲ್‌ನಲ್ಲಿ ಈ ಅಂಗಡಿಯಲ್ಲಿ ಕೆಲಸಕ್ಕೆ ಸೇರಿದ್ದ. ಆದರೆ ಕೆಲಸ ಸರಿ ಇಲ್ಲದ ಕಾರಣ ಜೂನ್‌ನಲ್ಲಿ ಆತನನ್ನು ವಜಾಗೊಳಿಸಲಾಗಿತ್ತು. ಈ ವೇಳೆ ತನಗೆ ಬರಬೇಕಿದ್ದ ₹10,000 ಬಾಕಿ ಸಂಬಳವನ್ನು ನೀಡಲು ಮಾಲೀಕರು ನಿರಾಕರಿಸಿದ್ದರಿಂದ ದ್ವೇಷ ಬೆಳೆಸಿಕೊಂಡಿದ್ದ.
ಸೆಪ್ಟೆಂಬರ್ 8 ರ ರಾತ್ರಿ 9 ಗಂಟೆಗೆ ಮಾರುಕಟ್ಟೆ ಪ್ರವೇಶಿಸಿ 5ನೇ ಮಹಡಿಯ ಮೆಟ್ಟಿಲುಗಳ ನಡುವೆ ಅಡಗಿ ಕುಳಿತಿದ್ದ ಆರೋಪಿ, ಮಧ್ಯರಾತ್ರಿ 12:30ಕ್ಕೆ ಯಾರೂ ಇಲ್ಲದ ವೇಳೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ. ಕೃತ್ಯದ ಬಳಿಕ ಮೊಬೈಲ್ ಸ್ವಿಚ್ ಆಫ್ ಮಾಡಿ ಕುಟುಂಬ ಸಮೇತನಾಗಿ ಅಯೋಧ್ಯೆ ಹಾಗೂ ಖಾತು ಶ್ಯಾಮ್ ಧಾಮಕ್ಕೆ ಪರಾರಿಯಾಗಿದ್ದ ಆರೋಪಿಯನ್ನು, ಸೂರತ್‌ಗೆ ವಾಪಸಾಗುತ್ತಿದ್ದಂತೆ ದಿಂಡೋಲಿ ಪ್ರದೇಶದಲ್ಲಿ ಪೊಲೀಸರು ಬಂಧಿಸಿದ್ದಾರೆ.


