ಮಂಗಳೂರು, ಸೆ.18: ಮಂಗಳೂರಿನಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯ ಬಳಿಕ ದಕ್ಷಿಣ ಕನ್ನಡ ಜಿಲ್ಲೆಗೆ ಸಂಬಂಧಿಸಿದಂತೆ ಹಲವು ಮಹತ್ವದ ಘೋಷಣೆಗಳನ್ನು ಮಾಡಲಾಗಿದೆ. ಜಿಲ್ಲೆಯ ಪ್ರಮುಖ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳ ಅಭಿವೃದ್ಧಿ, ಕರಾವಳಿ ಸಮಸ್ಯೆಗಳು, ಮೀನುಗಾರಿಕೆ ಹಾಗೂ ಕಂಬಳ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸ ಪ್ರಸಿದ್ಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳ ಸಮಗ್ರ ಅಭಿವೃದ್ಧಿಗಾಗಿ ಸರ್ಕಾರ ಅನುದಾನ ಮಂಜೂರು ಮಾಡಿದೆ.
- ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಪುತ್ತೂರು – ₹5 ಕೋಟಿ
- ಒಡಿಯೂರು ಮಠ, ವಿಟ್ಲ – ₹1 ಕೋಟಿ
- ಶ್ರೀಧಾಮ ಮಾಣಿಲ ಮಠ – ₹1 ಕೋಟಿ
- ಕುಕ್ಕಾಜೆ ಕಾಳಿಕಾಂಬ ಅಂಜನೇಯ ಸ್ವಾಮಿ ಕ್ಷೇತ್ರ – ₹1 ಕೋಟಿ
- ಕಾಣಿಯೂರು ಚಾಮುಂಡೇಶ್ವರಿ ಕ್ಷೇತ್ರ – ₹1 ಕೋಟಿ
- ಪಿಲಿ ಚಾಮುಂಡಿ ದೈವಸ್ಥಾನ, ಕೊಂಡನ-ಕೋಟೆಕಾರ್ – ₹1 ಕೋಟಿ
- ಶ್ರೀ ರಾಮ ಕ್ಷೇತ್ರ, ಕನ್ಯಾಡಿ – ₹1 ಕೋಟಿ
- ಕೇಮಾರು ಮಠ, ಶ್ರೀ ಸಾಂದೀಪನಿ ಸಾಧನಾಶ್ರಮ – ₹1 ಕೋಟಿ
- ಕರಾವಳಿ ಕಡಲ್ಕೊರೆತಕ್ಕೆ ₹208.94 ಕೋಟಿ
ಕರಾವಳಿ ಜಿಲ್ಲೆಗಳ ಪ್ರಮುಖ ಸಮಸ್ಯೆಯಾಗಿರುವ ಕಡಲ್ಕೊರೆತ ನಿಯಂತ್ರಣಕ್ಕಾಗಿ NDRF Guidelines ಅಡಿಯಲ್ಲಿ ₹208.94 ಕೋಟಿ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗಿದೆ. ಈ ಸಂಬಂಧದ ಪ್ರಸ್ತಾವನೆ ಪ್ರಸ್ತುತ ಕೇಂದ್ರ ಸರ್ಕಾರದ ಮಟ್ಟದಲ್ಲಿ ಬಾಕಿಯಿದೆ ಎಂದು ದಾಖಲೆ ತಿಳಿಸಿದೆ.
ಪುತ್ತೂರು ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ 579.49 ಕೋಟಿ ಅನುದಾನ ಘೋಷಿಸಿರುವ ಮುಖ್ಯಮಂತ್ರಿ, ಪುತ್ತೂರಿನ ವಿಟ್ಲ ನೀರಾವರಿ ಯೋಜನೆಗೆ 100 ಕೋಟಿ ಅನುದಾನ ನೀಡುವುದಾಗಿ ತಿಳಿಸಿದ್ದಾರೆ.
ಮೀನುಗಾರಿಕೆ ಉತ್ತೇಜನಕ್ಕೆ Fisheries Park
ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳು ಒಟ್ಟು ಸುಮಾರು 343.30 ಕಿ.ಮೀ. ಕರಾವಳಿ ತೀರ ಹೊಂದಿದ್ದು, ಮೀನುಗಾರಿಕೆ ಹಾಗೂ ಸಾಗರೋತ್ಪನ್ನ ಕ್ಷೇತ್ರದಲ್ಲಿ ಮಹತ್ವದ ಕೊಡುಗೆ ನೀಡುತ್ತಿವೆ.
ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ತಾಲ್ಲೂಕಿನ ಕೊಲ್ಲೂರು, ಬಳ್ಳುಂಜೆ ಮತ್ತು ಉಳಿಪಾಡಿ ಗ್ರಾಮಗಳ ವ್ಯಾಪ್ತಿಯಲ್ಲಿ Fisheries Park ಅಭಿವೃದ್ಧಿಪಡಿಸಲು ಸರ್ಕಾರ ಮುಂದಾಗಿದೆ. ಒಟ್ಟು 316.79 ಎಕರೆ ಜಮೀನಿನ ಪೈಕಿ 150 ಎಕರೆ ಜಮೀನನ್ನು Fisheries Park ಅಭಿವೃದ್ಧಿಗೆ ಕಾಯ್ದಿರಿಸಿ ಸರ್ಕಾರ ಆದೇಶಿಸಿದೆ.
ವಿವಿಧ ಸಂಸ್ಥೆಗಳಿಗೆ ಅನುದಾನ
ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಸಂಸ್ಥೆಗಳಿಗೆ ಸರ್ಕಾರದಿಂದ ಅನುದಾನ ಮಂಜೂರು ಮಾಡಲಾಗಿದೆ. ಶಾಂತಿ ಎಜುಕೇಷನಲ್ ಟ್ರಸ್ಟ್, ಮರ್ಕಳ ಜುಮ್ಮಾ ಮಸೀದಿ, ಅಲ್-ಮರ್ಕಝುಲ್ ಇಸ್ಲಾಮಿ, ದಾರುನ್ನೂರ್ ಎಜುಕೇಷನಲ್ ಸೆಂಟರ್, ಕರ್ನಾಟಕ ಇಸ್ಲಾಮಿಕ್ ಅಕಾಡೆಮಿ, ಮಾರ್ಕಝುಲ್ ಹುದಾ ವುಮೆನ್ಸ್ ಕಾಲೇಜು, ಸೌತ್ ಕರ್ನಾಟಕ ಸಲಫಿ ಮೂವ್‌ಮೆಂಟ್ ಸೇರಿದಂತೆ ಹಲವು ಸಂಸ್ಥೆಗಳು ಈ ಪಟ್ಟಿಯಲ್ಲಿವೆ. ಕ್ರೈಸ್ತ ಧಾರ್ಮಿಕ ಸಂಸ್ಥೆಗಳಾದ St. Joseph Vaz Shrine, Infant Jesus Shrine ಮತ್ತು St. Lawrence Shrineಗಳಿಗೂ ಅನುದಾನ ನೀಡಲಾಗಿದೆ.
ಕಂಬಳ ಅನುದಾನ ₹1 ಕೋಟಿಗೆ ಹೆಚ್ಚಳ
ಕರಾವಳಿ ಕರ್ನಾಟಕದ ಜನಪದ ಕ್ರೀಡೆಯಾದ ಕಂಬಳಕ್ಕೆ ನೀಡಲಾಗುತ್ತಿದ್ದ ಸರ್ಕಾರದ ಅನುದಾನವನ್ನು ₹40 ಲಕ್ಷದಿಂದ ₹1 ಕೋಟಿಗೆ ಹೆಚ್ಚಿಸಲಾಗಿದೆ. ಕಂಬಳವನ್ನು ಉತ್ತೇಜಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.
ಒಟ್ಟಾರೆ, ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಕರಾವಳಿ ಭಾಗದ ಧಾರ್ಮಿಕ, ಸಾಂಸ್ಕೃತಿಕ, ಕೈಗಾರಿಕಾ, ಮೀನುಗಾರಿಕೆ ಮತ್ತು ಜನಪದ ಕ್ಷೇತ್ರಗಳಿಗೆ ಸಂಬಂಧಿಸಿದ ಹಲವು ಪ್ರಮುಖ ಘೋಷಣೆಗಳು ಹೊರಬಿದ್ದಿವೆ.


