ಬೆಂಗಳೂರು: ಮದುವೆಯಾಗುವುದಾಗಿ ನಂಬಿಸಿ ಪ್ರಖ್ಯಾತ ಟ್ಯಾಟೂ ಆರ್ಟಿಸ್ಟ್ ಹಾಗೂ ನಟನಿಂದ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸಿರುವ ಘಟನೆ ನಗರದ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ಪರಪುರುಷನ ಜೊತೆ ವೀಡಿಯೋ ಕಾಲ್ನಲ್ಲಿದ್ದಾಗ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಮಹಿಳೆಯನ್ನು ಪ್ರಶ್ನೆ ಮಾಡಿದ್ದಕ್ಕೆ, ಸಂತ್ರಸ್ತ ನಟನ ಮೇಲೆ ಕಬ್ಬಿಣದ ರಾಡ್ನಿಂದ ಹಲ್ಲೆ ನಡೆಸಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ 10 ಲಕ್ಷಕ್ಕೂ (1 ಮಿಲಿಯನ್) ಅಧಿಕ ಫಾಲೋವರ್ಸ್ ಹೊಂದಿ, ‘ಘೋಸ್ಟ್ ಟ್ಯಾಟೂ ಆರ್ಟಿಸ್ಟ್’ ಎಂದೇ ಹೆಸರುವಾಸಿಯಾಗಿರುವ ಅರ್ಜುನ್ ವಂಚನೆಗೊಳಗಾದ ನಟ. ಇತ್ತೀಚೆಗೆ ಸಿನಿಮಾಗಳಲ್ಲೂ ನಟಿಸಲು ಅವಕಾಶ ಗಿಟ್ಟಿಸಿಕೊಂಡಿದ್ದ ಅರ್ಜುನ್ ಅವರಿಗೆ, ಎರಡು ವರ್ಷಗಳ ಹಿಂದೆ ತಮ್ಮ ಟ್ಯಾಟೂ ಸ್ಟುಡಿಯೋದಲ್ಲಿ ಸಂಪ್ರಿತಾ ಎಂಬ ಮಹಿಳೆಯ ಪರಿಚಯವಾಗಿತ್ತು.
ತನಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ ಹಾಗೂ ಗಂಡ ಮೃತಪಟ್ಟಿದ್ದಾರೆ ಎಂದು ಸಂಪ್ರಿತಾ ಅರ್ಜುನ್ ಅವರ ಬಳಿ ಹೇಳಿಕೊಂಡಿದ್ದಳು. ಕಾಲಕ್ರಮೇಣ ಇಬ್ಬರ ನಡುವಿನ ಪರಿಚಯ ಪ್ರೀತಿಗೆ ತಿರುಗಿತ್ತು. ಇದೇ ವೇಳೆ ಅರ್ಜುನ್ ತಮ್ಮ ಪತ್ನಿಯಿಂದ ವಿಚ್ಛೇದನ ಪಡೆದಿದ್ದರು. ಬಳಿಕ ಅರ್ಜುನ್ ಅವರನ್ನು ಮದುವೆಯಾಗುವುದಾಗಿ ನಂಬಿಸಿದ್ದ ಸಂಪ್ರಿತಾ, ಅವರಿಂದ ಹಂತ ಹಂತವಾಗಿ ಲಕ್ಷಾಂತರ ರೂಪಾಯಿ ಹಣ ಪಡೆದುಕೊಂಡಿದ್ದಳು. ಆದರೆ ಕಳೆದ ಒಂದು ವರ್ಷದಿಂದ ಮದುವೆ ವಿಚಾರ ಎತ್ತಿದಾಗಲೆಲ್ಲಾ ನಾಳೆ, ನಾಡಿದ್ದು ಎಂದು ಕಾಲ ತಳ್ಳುತ್ತಿದ್ದಳು.
ಸೆಪ್ಟೆಂಬರ್ 2 ರಂದು ಅರ್ಜುನ್ ಸಂಪ್ರಿತಾಗೆ ಕರೆ ಮಾಡಿದಾಗ ಆಕೆ ಕರೆ ಸ್ವೀಕರಿಸಿರಲಿಲ್ಲ. ಅನುಮಾನಗೊಂಡು ಆಕೆಯ ಮನೆ ಬಳಿ ತೆರಳಿದಾಗ ಸಂಪ್ರಿತಾ ಪರಪುರುಷನ ಜೊತೆ ಅಶ್ಲೀಲವಾಗಿ ವೀಡಿಯೋ ಕಾಲ್ನಲ್ಲಿ ಮಾತನಾಡುತ್ತಿರುವುದು ಕಂಡುಬಂದಿದೆ. ಇದನ್ನು ಅರ್ಜುನ್ ಪ್ರಶ್ನಿಸಿದಾಗ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಈ ವೇಳೆ ಆಕ್ರೋಶಗೊಂಡ ಮಹಿಳೆ ಹಾಗೂ ಆಕೆಯ ಕಡೆಯವರು ಅರ್ಜುನ್ ಮೇಲೆ ಕಬ್ಬಿಣದ ರಾಡಿನಿಂದ ಭೀಕರವಾಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಹಲ್ಲೆಯ ಬಳಿಕ ತೀವ್ರವಾಗಿ ಗಾಯಗೊಂಡಿದ್ದ ಅರ್ಜುನ್, ಆರಂಭದಲ್ಲಿ ಮರ್ಯಾದೆಗೆ ಅಂಜಿ ತಮಗೆ ಅಪಘಾತವಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಹಂಚಿಕೊಂಡಿದ್ದರು. ಆದರೆ ವಂಚನೆ ಹಾಗೂ ಹಲ್ಲೆಯ ನಿಜ ಬಣ್ಣ ಬೆಳಕಿಗೆ ಬರುತ್ತಿದ್ದಂತೆ, ಪ್ರಸ್ತುತ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಕರಣ ಕಾಯ್ದಿರಿಸಿಕೊಂಡಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.


